ಬೆಂಗಳೂರು : ಬಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದಿದ್ದ ಅಪ್ರಾಪ್ತ ಕ್ರೀಡಾಪಟುಗಳ ಮೇಲೆ ತರಬೇತುದಾರನೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಮಂಗಳೂರಿನ ಪ್ರತಿಷ್ಠಿತ ಕ್ಲಬ್‌ಗೆ ಸಂಬಂಧಿಸಿದ ಬಾಸ್ಕೆಟ್‌ಬಾಲ್ ತರಬೇತುದಾರ ಆದಿತ್ಯ ಮಹಾಲೆ ವಿರುದ್ಧ ಪೋಕ್ಸೋ (POCSO) ಕಾಯಿದೆಯಡಿ ಜೀರೋ ಎಫ್‌ಐಆರ್ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದೂರಿನ ಪ್ರಕಾರ, ಕಳೆದ ಜೂನ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಬಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಭಾಗವಹಿಸಲು ಕರಾವಳಿ ಭಾಗದ ಅಪ್ರಾಪ್ತ ಕ್ರೀಡಾಪಟುಗಳನ್ನು ಕರೆತರಲಾಗಿತ್ತು. ಅವರಿಗೆ ಗಾಂಧಿನಗರ ವ್ಯಾಪ್ತಿಯ ವಸತಿಗೃಹವೊಂದರಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು. ಜೂನ್ 20ರ ತಡರಾತ್ರಿ ತರಬೇತುದಾರ ಅಪ್ರಾಪ್ತ ಕ್ರೀಡಾಪಟುಗಳಿಗೆ ಬಲವಂತವಾಗಿ ನೃತ್ಯ ಮಾಡಲು ಒತ್ತಾಯಿಸಿದ್ದಲ್ಲದೆ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೋಷಕರು ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ದೌರ್ಜನ್ಯಕ್ಕೆ ಒಳಗಾದವರಲ್ಲಿ ಕರಾವಳಿ ಭಾಗದ ಕೆಲವು ಅಪ್ರಾಪ್ತ ಕ್ರೀಡಾಪಟುಗಳಿದ್ದು, ಪ್ರಕರಣದ ಸೂಕ್ಷ್ಮತೆ ಹಾಗೂ ಅಪ್ರಾಪ್ತರ ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅವರ ಗುರುತಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಘಟನೆ ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಹಿನ್ನೆಲೆಯಲ್ಲಿ ಜೀರೋ ಎಫ್‌ಐಆರ್ ಅನ್ನು ಮುಂದಿನ ತನಿಖೆಗಾಗಿ ಅಲ್ಲಿಗೆ ವರ್ಗಾಯಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.



