Wednesday, July 15, 2026
Google search engine

Homeರಾಜ್ಯಸಂಚಾರ ನಿಯಮ ಉಲ್ಲಂಘನೆ ದಂಡಕ್ಕೆ ಭರ್ಜರಿ ಸ್ಪಂದನೆ : ಮೆಗಾ ಲೋಕ್ ಅದಾಲತ್‌ನಲ್ಲಿ 55 ಕೋಟಿ...

ಸಂಚಾರ ನಿಯಮ ಉಲ್ಲಂಘನೆ ದಂಡಕ್ಕೆ ಭರ್ಜರಿ ಸ್ಪಂದನೆ : ಮೆಗಾ ಲೋಕ್ ಅದಾಲತ್‌ನಲ್ಲಿ 55 ಕೋಟಿ ರೂ. ದಂಡ ಸಂಗ್ರಹ!

ಬೆಂಗಳೂರು : ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (KSLSA) ಮತ್ತು ರಾಜ್ಯ ಸರ್ಕಾರದ ವಿಶೇಷ ಪ್ರಯತ್ನದ ಫಲವಾಗಿ, ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಯಲ್ಲಿ ಸಾರ್ವಜನಿಕರು ಭಾರೀ ಆಸಕ್ತಿ ತೋರಿಸಿದ್ದಾರೆ. ಬಾಕಿ ದಂಡದ ಮೇಲೆ ಘೋಷಿಸಲಾಗಿದ್ದ ಶೇ. 50 ರಷ್ಟು ರಿಯಾಯಿತಿ ಯೋಜನೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 55 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ.

ಜುಲೈ 11 ರಂದು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ‘ಮೆಗಾ ಲೋಕ್ ಅದಾಲತ್’ ಮೂಲಕ ದಾಖಲೆಯ ಮಟ್ಟದಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಈ ರಿಯಾಯಿತಿ ಯೋಜನೆಯಡಿ ಒಟ್ಟು 19,13,659 ಸಂಚಾರ ಚಲನ್ ಪ್ರಕರಣಗಳು ಇತ್ಯರ್ಥಗೊಂಡಿವೆ.
ಲೋಕ್ ಅದಾಲತ್‌ ನಲ್ಲಿ 2.54 ಲಕ್ಷ ಬಾಕಿ ಪ್ರಕರಣಗಳು ಹಾಗೂ 76.25 ಲಕ್ಷ ಪೂರ್ವ ವ್ಯಾಜ್ಯ ಪ್ರಕರಣಗಳು ಸೇರಿದಂತೆ ಒಟ್ಟು 78.79 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಈ ಇಡೀ ಪ್ರಕ್ರಿಯೆಯಲ್ಲಿ ಒಟ್ಟು 3,017 ಕೋಟಿ ರೂಪಾಯಿಗಳಷ್ಟು ಮೊತ್ತದ ವಿವಾದಗಳಿಗೆ ತೆರೆ ಎಳೆಯಲಾಗಿದೆ. ಸಂಚಾರ ದಂಡದ ಮೇಲಿನ ಶೇ. 50 ರಷ್ಟು ರಿಯಾಯಿತಿಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಜೂನ್ 21 ರಿಂದ ಜುಲೈ 10 ರವರೆಗೆ 20 ದಿನಗಳ ಕಾಲಾವಕಾಶ ನೀಡಲಾಗಿತ್ತು.

ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳು ಹಾಗೂ KSLSA ಕಾರ್ಯಕಾರಿ ಅಧ್ಯಕ್ಷರಾದ ನ್ಯಾಯಮೂರ್ತಿ ಅನು ಶಿವರಾಮನ್ ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಇತರ ಮಹತ್ವದ ಸಾಧನೆಗಳನ್ನು ಉಲ್ಲೇಖಿಸಿದ್ದಾರೆ “ಲೋಕ್ ಅದಾಲತ್ ಕೇವಲ ಸಂಚಾರ ದಂಡಕ್ಕೆ ಸೀಮಿತವಾಗಿರದೆ, ಸಾರ್ವಜನಿಕರ ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದೆ. ಸಾರಿಗೆ ಇಲಾಖೆಗೆ ಸಂಬಂಧಿಸಿದ 1,212 ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ 61.99 ಲಕ್ಷ ರೂಪಾಯಿಗಳನ್ನು ಮರುಪಡೆಯಲಾಗಿದೆ.”

ರಾಜ್ಯಾದ್ಯಂತ ಹಿರಿಯ ನಾಗರಿಕರಿಗೆ ಸಂಬಂಧಿಸಿದ 1,948 ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಮೂಲಕ ಅವರಿಗೆ ತ್ವರಿತ ನ್ಯಾಯ ಒದಗಿಸಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ನಡೆದ ಮೋಟಾರು ವಾಹನ ಅಪಘಾತ ಪ್ರಕರಣವೊಂದರಲ್ಲಿ, ಸಂತ್ರಸ್ತ ಕುಟುಂಬಕ್ಕೆ ಮಾತುಕತೆಯ ಮೂಲಕ ಬರೋಬ್ಬರಿ 2.45 ಕೋಟಿ ರೂಪಾಯಿಗಳ ಭಾರಿ ಪರಿಹಾರವನ್ನು ಕೊಡಿಸಲಾಗಿದೆ.

ಈ ಬಾರಿಯ ಮೆಗಾ ಲೋಕ್ ಅದಾಲತ್ ಕಾನೂನು ಸೇವೆಗಳ ಪ್ರಾಧಿಕಾರದ ಕ್ರಿಯಾಶೀಲ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.

RELATED ARTICLES
- Advertisment -
Google search engine

Most Popular