ಬೆಳಗಾವಿ : ಪೀರನವಾಡಿ ಗ್ರಾಮದಲ್ಲಿ ತಾಯಿ ಹಾಗೂ ಮೂರು ವರ್ಷದ ಮಗುವಿನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೃತಳ ಪತಿ ನಾಗೇಶ ತಳವಾರನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರೇಮಾ ತಳವಾರ ಅವರು ತಮ್ಮ ಮೂರು ವರ್ಷದ ಮಗ ಭುವನ್‌ನೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದರು. ಈ ಘಟನೆ ಬಳಿಕ ಮೃತಳ ಕುಟುಂಬಸ್ಥರು, ಇದು ಆತ್ಮಹತ್ಯೆಯಲ್ಲ ಪತಿ ಹಾಗೂ ಆತನ ಕುಟುಂಬದವರಿಂದ ನಡೆದ ಮಾನಸಿಕ ಮತ್ತು ದೈಹಿಕ ಕಿರುಕುಳವೇ ಘಟನೆಗೆ ಕಾರಣ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು.
ಕುಟುಂಬಸ್ಥರ ದೂರಿನ ಆಧಾರದ ಮೇಲೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪತಿ ನಾಗೇಶ ತಳವಾರ, ಅತ್ತೆ ಸುಶೀಲಾ ತಳವಾರ, ಮೈದುನ ಹಾಗೂ ನಾದಿನಿ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣ ದಾಖಲಾದ ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರು ಇದೀಗ ಪ್ರಮುಖ ಆರೋಪಿ ನಾಗೇಶನನ್ನು ಬಂಧಿಸಿದ್ದಾರೆ. ಇನ್ನು ತಲೆಮರೆಸಿಕೊಂಡಿರುವ ಸುಶೀಲಾ ತಳವಾರ ಸೇರಿದಂತೆ ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿದಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಉಳಿದವರನ್ನೂ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.



