ಬೆಂಗಳೂರು : ಬಿಡದಿ ಟೌನ್ಶಿಪ್ ಯೋಜನೆ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದು, ಸ್ವಇಚ್ಛೆಯಿಂದ ಭೂಮಿ ನೀಡುವ ರೈತರಿಂದ ಮಾತ್ರ ಜಮೀನು ಪಡೆಯಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಸಮಿತಿ ರಚನೆಯಾಗಿ ವರದಿ ಬರುವವರೆಗೂ ಭೂಸ್ವಾಧೀನ ಪ್ರಕ್ರಿಯೆ ನಿಲ್ಲುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ರೆಡ್ಜೋನ್ನಿಂದ ಮುಕ್ತವಾಗಲು ಸ್ವಯಂಪ್ರೇರಣೆಯಿಂದ ಮುಂದೆ ಬಂದು ಭೂಮಿ ನೀಡುವವರಿಗೆ ಪರಿಹಾರ ನೀಡಿ ಜಮೀನು ಪಡೆಯಲಾಗುವುದು. ಇಷ್ಟವಿಲ್ಲದವರಿಗೆ ಯಾವುದೇ ಒತ್ತಾಯ ಮಾಡುವುದಿಲ್ಲ. ಪ್ರಕ್ರಿಯೆ ಮುಂದುವರಿಯುತ್ತದೆ ಎಂದರು.
ರೈತರ ಅಹವಾಲು ಕೇಳಲು ಸಮಿತಿ : ರೈತರ ಅಭಿಪ್ರಾಯ, ಅಹವಾಲು ಹಾಗೂ ಕಾನೂನು ಅಂಶಗಳನ್ನು ಪರಿಶೀಲಿಸುವ ಉದ್ದೇಶದಿಂದ ಸಮಿತಿ ರಚಿಸಲಾಗುವುದು ಎಂದು ತಿಳಿಸಿದ ಅವರು, “ಹಿಂದಿನ ಹಲವು ಮುಖ್ಯಮಂತ್ರಿಗಳು ಇಂತಹ ವಿಚಾರಗಳಲ್ಲಿ ತೀರ್ಮಾನ ತೆಗೆದುಕೊಂಡು ಸಮಸ್ಯೆ ಎದುರಿಸಿದ್ದಾರೆ. ನಾನು ಆ ರೀತಿಯ ಆತುರದ ನಿರ್ಧಾರ ಮಾಡುವುದಿಲ್ಲ ಎಂದರು.
ಹೈಕಮಾಂಡ್ ಆರೋಪಕ್ಕೆ ತಿರುಗೇಟು : ಬಿಡದಿ ಯೋಜನೆ ವಿಚಾರದಲ್ಲಿ ಹೈಕಮಾಂಡ್ ಮೆಚ್ಚಿಸಲು ನಿರ್ಧಾರ ಕೈಗೊಂಡಿದ್ದಾರೆ ಎಂಬ ದೇವೇಗೌಡರ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, 2006ರಲ್ಲಿ ಈ ಯೋಜನೆ ಆರಂಭಿಸಿದಾಗ ಯಾವ ಹೈಕಮಾಂಡ್ ಮೆಚ್ಚಿಸಲು ಮಾಡಲಾಗಿತ್ತು? ಎಂದು ಪ್ರಶ್ನಿಸಿದರು.
ರೆಡ್ಜೋನ್ ಬದಲಾವಣೆ ಇಲ್ಲ : ರೆಡ್ಜೋನ್ ತೆರವು ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಈಗಾಗಲೇ ಹೊರಡಿಸಿರುವ ಆದೇಶದ ಪ್ರಕಾರವೇ ಮುಂದುವರಿಯುತ್ತೇನೆ. ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದರು.
ಬಿಡದಿ ಟೌನ್ಶಿಪ್ ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಯಾರು ಭೂಮಿ ನೀಡುತ್ತಾರೋ ಅವರಿಂದ ಜಮೀನು ಪಡೆದು ಸರ್ಕಾರದ ಯೋಜನೆ ಜಾರಿಗೊಳಿಸಲಾಗುವುದು. ಪ್ರತಿಯೊಂದು ಪ್ರಕ್ರಿಯೆಯೂ ಪಾರದರ್ಶಕವಾಗಿರುತ್ತದೆ ಎಂದರು.
ರೈತರ ಮೇಲೆ ಕೇಸ್ ಹಾಕಿಲ್ಲ : ರೈತರ ವಿರುದ್ಧ ಪ್ರಕರಣ ದಾಖಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಯಾವ ರೈತರ ಮೇಲೂ ಕೇಸ್ ಹಾಕಿಲ್ಲ. ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಆತಂಕ ಪಡುವ ಅಗತ್ಯವಿಲ್ಲ”ಎಂದು ಹೇಳಿದರು.
2019ರ ಭೂಸ್ವಾಧೀನ ವಿಚಾರ ಪ್ರಸ್ತಾಪ : ಬಿಡದಿ ಯೋಜನೆ ಆರಂಭವಾದ ಹಲವು ವರ್ಷಗಳ ಬಳಿಕ 2019ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ 900 ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆಗ ₹80 ಲಕ್ಷದಿಂದ ₹1 ಕೋಟಿ ವರೆಗೆ ಪರಿಹಾರ ನೀಡಲಾಗಿತ್ತು ಎಂದು ಉಲ್ಲೇಖಿಸಿದ ಸಿಎಂ, ಆಗ ನಿಮ್ಮ ಹೋರಾಟ ಎಲ್ಲಿತ್ತು? ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದ ಬಳಿಕವೇ ಈ ವಿಚಾರದಲ್ಲಿ ಹೋರಾಟದ ಉತ್ಸಾಹ ಬಂದಿದೆಯೇ? ಎಂದು ಪ್ರಶ್ನಿಸಿದರು.



