ಬೆಂಗಳೂರು : ಬಿಡದಿ ಟೌನ್ಶಿಪ್ ಯೋಜನೆ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, ಯೋಜನೆಗೆ ಸಂಬಂಧಿಸಿದ ಹಿಂದಿನ ಸರ್ಕಾರಗಳ ನಿರ್ಧಾರಗಳನ್ನು ಪ್ರಸ್ತಾಪಿಸಿದ್ದಾರೆ.
ಈ ವಿಚಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ದೇವೇಗೌಡರ ಹೆಸರು ತೆಗೆದುಕೊಳ್ಳಲು ನನಗೆ ಇಷ್ಟವಿಲ್ಲ. ಆದರೆ ಅವರು ಆ ಸಮಯದಲ್ಲಿ ಅಧಿಕಾರದಲ್ಲಿದ್ದವರು ಎಂದು ಹೇಳಿದ ಸಿಎಂ, ಯೋಜನೆ ಆರಂಭವಾದ ಸುಮಾರು 15 ವರ್ಷಗಳ ಬಳಿಕ 2019ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ 900 ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳಲಾಗಿತ್ತು ಎಂದು ಹೇಳಿದರು.
ಆ ಸಂದರ್ಭದಲ್ಲಿ ಪ್ರತಿ ಎಕರೆಗೆ ₹80 ಲಕ್ಷದಿಂದ ₹1 ಕೋಟಿ ವರೆಗೆ ಪರಿಹಾರ ನೀಡಲಾಗಿತ್ತು ಎಂದು ಉಲ್ಲೇಖಿಸಿದ ಡಿ.ಕೆ.ಶಿವಕುಮಾರ್, ಆಗ ನಿಮ್ಮ ಹೋರಾಟ ಎಲ್ಲಿತ್ತು? ನಿಮ್ಮ ಧ್ವನಿ ಏನಾಗಿತ್ತು? ಧರಣಿ ಯಾಕೆ ನಡೆಯಲಿಲ್ಲ? ಎಂದು ಪ್ರಶ್ನಿಸಿದರು.
ಮುಂದುವರೆದು, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದ ಬಳಿಕವೇ ನಿಮಗೆ ಈ ವಿಚಾರದಲ್ಲಿ ಛಲ ಬಂದಿದೆಯೇ? ಆ ಸಮಯದಲ್ಲಿ ಅಶೋಕ್ ಅವರು ಕಂದಾಯ ಸಚಿವರಾಗಿದ್ದರು. ಆಗ ಅವರು ಯಾಕೆ ಧ್ವನಿ ಎತ್ತಲಿಲ್ಲ? ಎಂದು ಸಿಎಂ ಪ್ರಶ್ನಿಸಿದರು. ಅಲ್ಲದೆ ಬಿಡದಿ ಟೌನ್ಶಿಪ್ ವಿಚಾರದಲ್ಲಿ ಈಗ ನಡೆಯುತ್ತಿರುವ ವಿರೋಧದ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಆರೋಪಿಸಿದ ಅವರು, ಹಿಂದಿನ ಸರ್ಕಾರಗಳ ನಿರ್ಧಾರಗಳನ್ನೇ ಮುಂದುವರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.



