ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಜಮೀನು ಮಾಲೀಕರ ಸಮ್ಮತಿ ಪಡೆದು ಶೀಘ್ರವೇ ಕಪ್ಪಡಿ ಸೇತುವೆ ಮತ್ತು ಅದಕ್ಕೆ ಸಂಪರ್ಕ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲ್ಲೂಕಿನ ಗಂಧನಹಳ್ಳಿಯಿ0ದ ಕಪ್ಪಡಿ ಕ್ಷೇತ್ರಕ್ಕೆ ಸಂಪರ್ಕ ಒದಗಿಸಲು ಕಾವೇರಿ ನದಿಗೆ ಅಡ್ಡಲಾಗಿ ೨೫ ಕೋಟಿ ಮೊತ್ತದ ಸೇತುವೆ ನಿರ್ಮಾಣ ಮತ್ತು ಸಂಪರ್ಕ ರಸ್ತೆ ಅಭಿವೃದ್ಧಿಗೊಳಿಸಲು ಅಧಿಕಾರಿಗಳೊಂದಿಗೆ ಬುಧವಾರ ಸ್ಥಳ ಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಪ್ಪಡಿ ಕ್ಷೇತ್ರದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣವಾದರೆ ಗಂಧನಹಳ್ಳಿ ಸೇರಿದಂತೆ ಈ ಭಾಗದ ಗ್ರಾಮಸ್ಥರಿಗೆ, ಕಪ್ಪಡಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ. ಸಂಪರ್ಕ ರಸ್ತೆಯಿಂದ ಈ ಭಾಗವು ಕೂಡ ಅಭಿವೃದ್ಧಿಯಾಗುತ್ತದೆ ಎಂದರು.
ಈ ಹಿಂದೆ ಕಪ್ಪಡಿ ಕ್ಷೇತ್ರದ ಹಳೇ ವಾಟರ್ ಪಂಪ್ ಹೌಸ್ ನಿಂದ ಸಂಪರ್ಕ ಸೇತುವೆ ನಿರ್ಮಿಸಲು ಉದ್ದೇಶಿಸಿ ನಕ್ಷೆ ತಯಾರಿಸಲಾಗಿತ್ತು. ಕಾರಣಾಂತರಗಳಿ0ದ ಅದನ್ನು ಕೈಬಿಟ್ಟು ಬೇರೊಂದು ಸ್ಥಳ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಾಗಿದೆ, ಈ ಬಗ್ಗೆ ರೈತರೊಂದಿಗೆ ಚರ್ಚಿಸಿದ್ದೇವೆ, ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದೇವೆ. ಅದಕ್ಕೆ ಪೂರಕವಾಗಿ ರೈತರು ಕೂಡ ಸ್ಪಂದಿಸಿದ್ದಾರೆ. ಈ ಬಗ್ಗೆ ಚರ್ಚಿಸಿ ನಮ್ಮ ನಿರ್ಧಾರ ಹೇಳುತ್ತೇವೆ ಎಂದು ರೈತರು ತಿಳಿಸಿದ್ದಾರೆ ಎಂದರು.
ಸೇತುವೆ ಕಾಮಗಾರಿಯ ಟೆಂಡರ್ ಮುಗಿದಿದ್ದು, ಗುತ್ತಿಗೆದಾರರು ಕಳೆದ ವರ್ಷವೇ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ಇಲ್ಲಿ ಸೇತುವೆ ನಿರ್ಮಿಸುವುದರ ಜೊತೆಗೆ ಮುಖ್ಯ ರಸ್ತೆ ವರೆಗೆ ಸಂಪರ್ಕ ರಸ್ತೆ, ಚಿಕ್ಕ ಕಾಲುವೆಗೆ ಅಡ್ಡಲಾಗಿ ಸೇತುವೆ ಕಾಮಗಾರಿ ಕೂಡ ಕೈಗೆತ್ತಿಕೊಳ್ಳಲಾಗುತ್ತದೆ ತಿಳಿಸಿದರು. ಇಲ್ಲಿನ ಜವಾಬ್ದಾರಿ ಗಂಧನಹಳ್ಳಿ ಗ್ರಾಮದ ಮುಖಂಡರಿಗೆ ವಹಿಸಲಾಗಿದ್ದು ಜಮೀನು ಮಾಲೀಕರು ಒಪ್ಪಿಗೆ ಕೊಟ್ಟ ನಂತರ ಶೀಘ್ರವೇ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುತ್ತದೆ ಎಂದು ಹೇಳಿದರು.
ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ಎಇಇ ಅಯಾಜ್ ಪಾಷ, ಇಂಜಿನಿಯ್ ಸಿದ್ದೇಶ್ವರ ಪ್ರಸಾದ್, ಜಿ.ಪಂ.ಮಾಜಿ ಸದಸ್ಯ ಜಿ.ಆರ್.ರಾಮೇಗೌಡ, ತಾ.ಪಂ.ಮಾಜಿ ಅಧ್ಯಕ್ಷ ಗಾಂಧಿಶಿವಣ್ಣ, ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಮುಖಂಡರಾದ ಜಿ.ಎಸ್.ವೆಂಕಟೇಶ್, ಜಿ.ಎನ್.ರಘು, ಪ್ರೇಮಶಿವಣ್ಣ, ಬಲರಾಮು, ಸತೀಶ್, ಕೆಂಪರಾಜ್, ಮತ್ತು ರೈತರು ಉಪಸ್ಥಿತರಿದ್ದರು.



