ಬೆಂಗಳೂರು: ಚುನಾವಣಾ ಲಾಭಕ್ಕಾಗಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಅಗ್ಗದ ಗ್ಯಾರಂಟಿಗಳು ಮಕ್ಕಳ ಭವಿಷ್ಯಕ್ಕೆ ಎರವಾಗಿದೆ. ಮಹಿಳೆಯರಿಗೆ ಶಕ್ತಿ ತುಂಬುತ್ತೇವೆಂದು ಹೊರಟ ಕಾಂಗ್ರೆಸ್ ಪಕ್ಷದ ಸರ್ಕಾರ ಹೆತ್ತ ಮಕ್ಕಳ ಜೀವ ತೆಗೆಯುತ್ತಿದೆ ಎಂದು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಶಾಲಾ ವಿದ್ಯಾರ್ಥಿಗಳು ಬಸ್ ಹತ್ತಲಾಗದೆ ಪರದಾಡುತ್ತಿರುವ ಮತ್ತು ಮಕ್ಕಳು ಹತ್ತುತ್ತಿಂದತೆಯೇ ಬಸ್ ಮುಂದಕ್ಕೆ ಚಲಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹಂಚಿಕೊಂಡಿರುವ ಅವರು, ಶಕ್ತಿ ಯೋಜನೆ ಬಗ್ಗೆ ನನ್ನ ತಕರಾರು ಇಲ್ಲ. ಆದರೆ, ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಬಸ್ ಸೌಲಭ್ಯ ಕಲ್ಪಿಸಬೇಕು ಎನ್ನುವ ಬೇಡಿಕೆಗೆ ನನ್ನ ಸಂಪೂರ್ಣ ಬೆಂಬಲವಿದೆ. ರಾಜ್ಯ ಸರಕಾರ ಕೂಡಲೇ ಈ ಬಗ್ಗೆ ತುರ್ತುಕ್ರಮ ವಹಿಸಿ, ಶಾಲಾ ಮಕ್ಕಳಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ನನ್ನ ಆಗ್ರಹವಾಗಿದೆ ಎಂದು ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ.
ಒಂದೆಡೆ ಬಸ್ಸುಗಳ ಕೊರತೆ, ಇನ್ನೊಂದೆಡೆ ಮಹಿಳೆಯರು ಪ್ರವಾಸಿ ತಾಣಗಳಿಗೆ ಮುಗಿಬಿದ್ದ ಪರಿಣಾಮ ಮಕ್ಕಳು ರಾತ್ರಿಯಾದರೂ ಮನೆ ತಲುಪುತ್ತಿಲ್ಲ ಎನ್ನುವ ವರದಿ ಆಘಾತಕಾರಿ. ಗ್ರಾಮೀಣ ಪ್ರದೇಶದಲ್ಲಿ ಈ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸಿ, ಮಕ್ಕಳ ಪಾಡು ಕೇಳುವವರಿಲ್ಲವಾಗಿದೆ. ಪರೀಕ್ಷೆ ಸಮಯದಲ್ಲಿ ಅವರ ಸಂಕಷ್ಟ ಹೇಳತೀರದು. ಚುನಾವಣೆ ಲಾಭಕ್ಕಾಗಿ ಕಾಂಗ್ರೆಸ್ ರೂಪಿಸಿ ಜಾರಿಗೆ ತಂದಿರುವ ಅಗ್ಗದ ಗ್ಯಾರಂಟಿಗಳು ಮಕ್ಕಳ ಭವಿಷ್ಯಕ್ಕೂ ಎರವಾಗಿವೆ. ಮಹಿಳೆಯರಿಗೆ ಶಕ್ತಿ ತುಂಬುತ್ತೇವೆ ಎಂದು ಹೊರಟ ಆ ಪಕ್ಷದ ಸರಕಾರ, ಅವರು ಹೆತ್ತ ಮಕ್ಕಳ ಜೀವ ತೆಗೆಯುತ್ತಿದೆ. ಇದು ಕರ್ನಾಟಕದ ಮಾದರಿ! ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.