ಕೊಪ್ಪಳ : ಬಿಜೆಪಿ ನಾಯಕರನ್ನ ಬ್ಲ್ಯಾಕ್‌ಮೇಲ್ ಮಾಡೋಕೆ ಮಾಡ್ತಿದ್ದಾರೆ, ಇದು ಅಭಿಮಾನೋತ್ಸವ ಅಲ್ಲ, ಬ್ಲ್ಯಾಕ್‌ಮೇಲೋತ್ಸವ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅಭಿಮಾನೋತ್ಸವ ಮಾಡೋಕೆ ಏನ್ ಕೆಲಸ ಮಾಡಿದ್ದಾರೆ. 50 ವರ್ಷ ಒಳ್ಳೆಯ ಕೆಲಸ ಮಾಡಿದ್ದರೆ ಮಾಡಬೇಕು, ಅದಕ್ಕಿಂತ ನೂರು ಪಟ್ಟು ಭ್ರಷ್ಟಾಚಾರ ಮಾಡಿದ್ದಾರೆ. ಅದಕ್ಕೆ ಜೈಲಿಗೆ ಹೋಗಿದ್ರು. ಸಿದ್ದರಾಮಯ್ಯ ಜೊತೆ ಅಡ್ಜಸ್ಟ್ಮೆಂಟ್ ಇರೋದಕ್ಕೆ ಹೊರಗಿದ್ದಾರೆ. ಇಲ್ಲಾಂದ್ರೆ ಜೈಲಲ್ಲಿ ಇರ್ತಿದ್ದರು. ಇದೀಗ ಬಿಜೆಪಿ ನಾಯಕರನ್ನು ಬ್ಲ್ಯಾಕ್‌ಮೇಲ್ ಮಾಡಲು ಅಭಿಮಾನೋತ್ಸವ ಮಾಡ್ತಿದ್ದಾರೆ. ಇದು ಸಂಭ್ರಮೋತ್ಸವ ಅಲ್ಲ, ಬ್ಲ್ಯಾಕ್‌ಮೇಲೋತ್ಸವ ಎಂದು ವ್ಯಂಗ್ಯವಾಡಿದ್ದಾರೆ.
ನವೆಂಬರ್‌ಗೆ ವಿಜಯೇಂದ್ರನ ಅವಧಿ ಮುಗಿಯತ್ತೆ, ರಿನಿವಲ್ ಮಾಡಲು ಜನರಿಗೆ ತೋರಿಸೋಕೆ ಮಾಡ್ತಿದ್ದಾರೆ. ಯಡಿಯೂರಪ್ಪ ಲಿಂಗಾಯತರಿಗೆ ಏನ್ ಮಾಡಿದ್ದಾರೆ. ಲಿಂಗಾಯತರನ್ನ ಒಬಿಸಿ ಮಾಡ್ತೀವಿ ಅಂದಿದ್ರು, ನಾಲ್ಕು ಮಠಕ್ಕೆ ಅನುದಾನ ಕೊಟ್ಟರೆ ಏನಾಯ್ತು? ಸಿಎಂ ಆದವರು ಒಂದು ಜಾತಿಗೆ ಸೀಮಿತ ಆಗಬಾರದು, ಎಲ್ಲಾ ಜಾತಿಯ ಬಡವರ ಪರ ಕೆಲಸ ಮಾಡಬೇಕು. ಲಿಂಗಾಯತ ಮಠಗಳಿಗೂ 2, 3 ಕೋಟಿ ರೂ. ಕೊಟ್ಟಿದ್ದಾರೆ, ಅವರು ಬಹುಪರಾಕ್ ಅಂತಾರೆ. ಯಡಿಯೂರಪ್ಪ ಯಾವ ಅಭಿವೃದ್ಧಿ ಕೆಲಸನೂ ಮಾಡಿಲ್ಲ. ನಾಳೆ ನಡೆಯುವ ಕಾರ್ಯಕ್ರಮ ತನ್ನ ಮಕ್ಕಳ ಭವಿಷ್ಯಕ್ಕಾಗಿ ಅಷ್ಟೇ. ದೃತರಾಷ್ಟ್ರನ ಮುಂದೆ ದುರ್ಯೋದನನ ಪಟ್ಟ ಕಟ್ಟಲ್ಲಿಕ್ಕೆ ನಡೆಯುವ ಕಾರ್ಯಕ್ರಮವಿದು ಎಂದು ಕಿಡಿಕಾರಿದ್ದಾರೆ.
ಇಂತಹ ಅನೇಕ ಭ್ರಷ್ಟ ಹಾಗೂ ಕೆಟ್ಟ ಪ್ರಕರಣಗಳು ಇರುವಂತಹ ವ್ಯಕ್ತಿ ಆದರ್ಶ ಆಗುವುದಿಲ್ಲ. ಇವತ್ತಿನ ರಾಜಕಾರಣ ಭ್ರಷ್ಟಾಚಾರ ತುಂಬಿದೆ, ತಿನ್ನೋದಕ್ಕೂ ಇತಿ ಮಿತಿ ಬೇಕಲ್ಲ. ಸಿಎಂ ಮಕ್ಕಳು ಎಲ್ಲರೂ ಅದನ್ನೇ ಮಾಡ್ತಾಯಿದ್ದಾರೆ. ಜನರ ಲೂಟಿ ಮಾಡೋದೇ ಕೆಲಸ ಆಗಿದೆ. ನಾಳೆ ಕಾರ್ಯಕ್ರಮದಲ್ಲಿ 50 ಸಾವಿರ ಕುರ್ಚಿ ಹಾಕಿದ್ದಾರೆ. 10 ಲಕ್ಷ ಜನರನ್ನು ಎಲ್ಲಿ ವಿಜಯೇಂದ್ರ, ಯಡಿಯೂರಪ್ಪನ ತಲೆ ಮೇಲೆ ಕೂರಿಸ್ತಾರಾ? ಯಡಿಯೂರಪ್ಪ ಅಂದ್ರೆ ಬಿಜೆಪಿ, ಬಿಜೆಪಿ ಅಂದ್ರೆ ಯಡಿಯೂರಪ್ಪ ಅನ್ನೋಹಂಗಾಗಿದೆ. ಪರ್ಯಾಯ ನಾಯಕರನ್ನ ಇವರು ಬೆಳೆಯೋಕೆ ಬಿಡೋದೇ ಇಲ್ಲ. ನನ್ನನ್ನ ಯಾರು ಮೂಲೆಗುಂಪು ಮಾಡಲ್ಲ, ಈಗ ನಾನು ಜನಾನುರಾಗಿ ಆಗಿದ್ದೀನಿ ಜಗದೀಶ ಶೆಟ್ಟರ್, ಸದಾನಂದ ಗೌಡ, ಬೊಮ್ಮಾಯಿ ಮೂಲೆ ಗುಂಪಾಗಿದ್ದಾರೆ ಎಂದಿದ್ದಾರೆ.
ಸಿಎಂ ಲೆವಲ್‌ಗಿಂತ ಹೆಚ್ಚಿದೆ ನನ್ನ ಲೆವಲ್. ವಿಜಯಪುರಕ್ಕೆ ಸಿಎಂ ಬಂದರೆ ಜನರು ನನಗೆ ಹೆಚ್ಚು ಚಪ್ಪಾಳೆ ಹೊಡೆದ್ರು. ಸಿದ್ದರಾಮಯ್ಯ ಅವರಿಗೆ ಕಸಿವಿಸಿ ಆಯಿತು, ಸಿದ್ದರಾಮಯ್ಯ ಕೂಡ ಅದನ್ನ ಒಪ್ಪಿಕೊಂಡ್ರು, ಆದ್ರೆ ನನಗೆ ಸಿದ್ದರಾಮಯ್ಯ ಜೊತೆ ಅಡ್ಜಸ್ಟ್ಮೆಂಟ್ ಇಲ್ಲ, ಅವರ ಮನೆಗೆ ಹೋಗಲ್ಲ. ಯಡಿಯೂರಪ್ಪ ಅವರ ಹಾಗೇ ರಾತ್ರಿ ಮನೆಗೆ ಹೋಗಿ ಲೇಟರ್ ಕೊಡಲ್ಲ. ಡಿಕೆಶಿ ಮನೆಗೆ ಇದುವರೆಗೂ ನಾನು ಕಾಲಿಟ್ಟಿಲ್ಲ. ಇದೇ ವೇಳೆ ಯತ್ನಾಳ್ ಹೊಸ ಪಕ್ಷದ ವಿಚಾರವಾಗಿ ಮಾತನಾಡಿ, ಆರು ತಿಂಗಳ ರಾಜ್ಯ ಪ್ರವಾಸ ಮಾಡಿ ಜನರ ಅಭಿಪ್ರಾಯ ತಗೊಂಡು ನಿರ್ಣಯ ಮಾಡ್ತೀನಿ ಎಂದು ಹೇಳಿದ್ದಾರೆ.



