Sunday, April 20, 2025
Google search engine

Homeರಾಜ್ಯತುಂಗಭದ್ರಾ ಡ್ಯಾಂ ಗೇಟ್​ನ ಚೈನ್​ ಕಟ್: ಜನರಲ್ಲಿ ಆತಂಕ!

ತುಂಗಭದ್ರಾ ಡ್ಯಾಂ ಗೇಟ್​ನ ಚೈನ್​ ಕಟ್: ಜನರಲ್ಲಿ ಆತಂಕ!


ಕೊಪ್ಪಳ: ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ಸಂಖ್ಯೆ 19ರಲ್ಲಿ ಚೈನ್‌ ಲಿಂಕ್‌ ತುಂಡಾಗಿರುವ ಕಾರಣ ನದಿಗೆ ಅಪಾರ ಪ್ರಮಾಣದ ನೀರು ಹರಿಸಲಾಗುತ್ತಿದೆ. ದುರಸ್ತಿ ಕಾರ್ಯಕ್ಕೆ 1 ವಾರ ಸಮಯ ಬೇಕು. ನೀರಿನ ರಭಸಕ್ಕೆ ತುಂಡಾಗಿರುವ ಭಾಗವೂ ಕಾಣುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು 105 ಟಿಎಂಸಿ ಸಾಮರ್ಥ್ಯ ಹೊಂದಿರುವ ತುಂಗಭದ್ರಾ ಜಲಾಶಯದ ಚೈನ್​ ಕಟ್ಟಾಗಿದ್ದು ಇತಿಹಾಸದಲ್ಲೆ ಇದೇ ಮೊದಲ ಬಾರಿಗೆ.

1949ರಲ್ಲಿ ತುಂಗಭದ್ರಾ ಜಲಾಶಯದ ನಿರ್ಮಾಣ ಕಾರ್ಯ ಆರಂಭವಾಗಿದೆ. 1953ರಲ್ಲಿ ಜಲಾಶಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ತುಂಗಭದ್ರಾ ಜಲಾಶಯ ನಿರ್ಮಾಣ ಆರಂಭದಲ್ಲಿ ಆಂಧ್ರ, ಮದ್ರಾಸ್​ ಪ್ರಾಂತ್ಯದ ಜಂಟಿ ಯೋಜನೆಯಾಗಿತ್ತು. ನಂತರ ಹೈದರಾಬಾದ್​, ಮೈಸೂರು ರಾಜ್ಯದ ನಡುವೆ ಒಪ್ಪಂದದಂತೆ ಮುನಿರಾಬಾದ್ ಬಳಿ ತುಂಗಭದ್ರಾ ಡ್ಯಾಂ ನಿರ್ಮಾಣವಾಗಿದೆ.

ತುಂಗಭದ್ರಾ ಡ್ಯಾಂ ದೇಶದ ಅತಿದೊಡ್ಡ ಕಲ್ಲಿನ ಡ್ಯಾಂ ಎಂಬ ಕೀರ್ತಿ ಪಡೆದಿದೆ. ಸಿಮೆಂಟ್​ ಇಲ್ಲದೇ ಸುಣ್ಣದ ಕಲ್ಲು, ಸುರ್ಕಿ ಗಾರೆಯಿಂದ ಡ್ಯಾಂ ನಿರ್ಮಾಣ ಮಾಡಲಾಗಿದೆ. ಜಲಾಶಯದ ನಿರ್ವಹಣೆಯನ್ನು ಎರಡು ರಾಜ್ಯಗಳು ನೋಡಿಕೊಳ್ಳುತ್ತವೆ. ತುಂಗಭದ್ರಾ ಜಲಾಶಯ ಕರ್ನಾಟಕದಲ್ಲಿದ್ದರೂ ಇದರ ನಿರ್ವಹಣೆ ಮಾತ್ರ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳು ಮಾಡುತ್ತವೆ.

ಜಲಾಶಯ ಮತ್ತು ಜಲಾಶಯನ ಹಿಂಬಾಗದ ಉಸ್ತುವಾರಿ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ತುಂಗಭದ್ರಾ ಜಲಾಶಯ ಮಂಡಳಿ ನೋಡಿಕೊಳ್ಳುತ್ತದೆ. ತುಂಗಭದ್ರಾ ಜಲಾಶಯ ಮಂಡಳಿ​ಗೆ ಐಎಎಸ್ ಅಧಿಕಾರಿ ಕಾರ್ಯದರ್ಶಿಯಾಗಿದ್ದಾರೆ. ತುಂಗಭದ್ರಾ ಜಲಾಶಯ ಮಂಡಳಿ ಕಚೇರಿ ಹೊಸಪೇಟೆ ಬಳಿ ಇದೆ.

ಜಲಾಶಯದ ಮುಂಬಾಗದ ವ್ಯಾಪ್ತಿ ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದೆ. ಕಾಲುವೆಗಳ ನಿರ್ವಹಣೆ, ರಿಪೇರಿ ಮಾಡುದಷ್ಟೇ ನಿಗಮಕ್ಕೆ ಸೇರಿದೆ. ತುಂಗಭದ್ರಾ ವಲಯ ಕಚೇರಿ ಮುನಿರಾಬಾದ್​ನಲ್ಲಿದೆ. ಸಿಇ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದಾರೆ.

ತುಂಡಾಗಿರುವ ಚೈನ್​ ರಿಪೇರಿ ಮಾಡಿ, ಹೊಸ ಗೇಟ್​ ಕೂಡಿಸಬೇಕೆಂದರೆ ಜಲಾಶಯದಲ್ಲಿನ ಸರಿ ಸುಮಾರು 65 ಟಿಎಂಸಿ ನೀರು ಖಾಲಿ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಡ್ಯಾಂನಲ್ಲಿನ ನೀರು ಖಾಲಿಯಾಗಬೇಕಾದರೆ 4-5 ದಿನ ಬೇಕಾಗಬಹುದು. ಇದಕ್ಕೆ ಪ್ರತಿದಿನ 2 ಲಕ್ಷ ಕ್ಯೂಸೆಕ್ ನೀರು ನದಿ ಪಾತ್ರಕ್ಕೆ ಬಿಡಬೇಕಾಗುತ್ತದೆ. ಒಂದು ವೇಳೆ ಇಷ್ಟು ನೀರು ಹೊರಕ್ಕೆ ಬಿಟ್ಟರೆ ಜಲಾಶಯ ಶೇ 60 ರಷ್ಟು ಖಾಲಿಯಾಗಲಿದೆ.

ಗೇಟ್ ದುರಸ್ಥಿಗೆ ಒಂದು ವಾರಕ್ಕೂ ಹೆಚ್ಚು ಸಮಯದ ಅವಶ್ಯಕತೆ ಇದೆ. ಹೈದರಾಬಾದ್ ಮೂಲದ ಕಂಪನಿಯಿಂದ ಹೊಸ ಗೇಟ್​ನ್ನು ತಂದು ಅಳವಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ಗೇಟ್‌ ಡಿಸೈನ್ ಅನ್ನು ಅಧಿಕಾರಿಗಳು ಕಂಪನಿಗೆ ಕಳುಹಿಸಿದ್ದಾರೆ. ಆದರೆ ‌ಹೊಸ‌ಗೇಟ್ ಸಿದ್ಧವಾಗಿ, ಅಳವಡಿಸಬೇಕಾದರೆ ವಾರಕ್ಕೂ ಹೆಚ್ಚು ಸಮಯ ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುರಸ್ತಿ ಕಾರ್ಯ ವಿಳಂಭವಾದಷ್ಟು ನೀರು ಖಾಲಿಯಾಗುವ ಆತಂಕ ಶುರುವಾಗಿದೆ.

RELATED ARTICLES
- Advertisment -
Google search engine

Most Popular