ಅಹಮದಾಬಾದ್ನಲ್ಲಿ ನಡೆದ ವಿಮಾನ ಅಪಘಾತದ ನಂತರದ ಕಾರ್ಯಾಚರಣಾ ಅಡಚಣೆಗಳಿಂದಾಗಿ, ಜೂನ್ 21ರಿಂದ ಜುಲೈ 15ರವರೆಗೆ ಏರ್ ಇಂಡಿಯಾ ಮೂರು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದೆ. ದೆಹಲಿ-ನೈರೋಬಿ, ಅಮೃತಸರ-ಲಂಡನ್ (ಗ್ಯಾಟ್ವಿಕ್), ಮತ್ತು ಗೋವಾ (ಮೋಪಾ)-ಲಂಡನ್ (ಗ್ಯಾಟ್ವಿಕ್) ಮಾರ್ಗಗಳ ಸೇವೆ ನಿಲ್ಲಿಸಲಾಗಿದೆ.
ಇನ್ನೂ 16 ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಉತ್ತರ ಅಮೆರಿಕದ ದೆಹಲಿ-ಟೊರೊಂಟೊ, ದೆಹಲಿ-ಚಿಕಾಗೋ, ದೆಹಲಿ-ಸ್ಯಾನ್ ಫ್ರಾನ್ಸಿಸ್ಕೊ ಸೇರಿ ಹಲವು ಮಾರ್ಗಗಳಲ್ಲಿ ಹಾರಾಟ ಕಡಿಮೆಯಾಗಲಿದೆ.
ಎಲ್ಲಾ ವಿಮಾನಗಳ ಕಟ್ಟುನಿಟ್ಟಿನ ಭದ್ರತಾ ತಪಾಸಣೆಗೆ ಸಮಯ ನೀಡುವುದು, ಮಧ್ಯಪ್ರಾಚ್ಯದಲ್ಲಿ ವಾಯುಪ್ರದೇಶ ಮುಚ್ಚುವಿಕೆಯಿಂದಾಗಿ ಹಾರಾಟದ ಅವಧಿ ಹೆಚ್ಚಾಗಿರುವ ಕಾರಣ ಈ ಕ್ರಮಕ್ಕೆ ಸಂಸ್ಥೆ ಮುಂದಾಗಿದೆ. ತೊಂದರೆಗೊಳಗಾದ ಪ್ರಯಾಣಿಕರಲ್ಲಿ ಕ್ಷಮೆ ಯಾಚಿಸಿದೆ. ಪರ್ಯಾಯ ವಿಮಾನಗಳು, ಉಚಿತ ಮರು-ವೇಳಾಪಟ್ಟಿ ಮತ್ತು ಪೂರ್ಣ ಮರುಪಾವತಿಯಂತಹ ಆಯ್ಕೆಗಳನ್ನು ಒದಗಿಸುತ್ತಿದ್ದು, ಪ್ರಯಾಣಿಕರನ್ನು ನೇರವಾಗಿ ಸಂಪರ್ಕಿಸುತ್ತಿದೆ ಎಂದು ಏರ್ ಇಂಡಿಯಾ ಹೇಳಿದೆ. ಏರ್ ಇಂಡಿಯಾ ತನ್ನ ವೈಡ್-ಬಾಡಿ ವಿಮಾನಗಳ ಹಾರಾಟದಲ್ಲಿ ಶೇಕಡಾ 15 ಈಗಾಗಲೇ ಕಡಿತ ಘೋಷಿಸಿದೆ.