ರಾಮಕೃಷ್ಣ ಮಿಷನ್ – ಸ್ವಚ್ಛ ಮಂಗಳೂರು ಅಭಿಯಾನದ ಫೆಬ್ರವರಿ ತಿಂಗಳ ಸ್ವಚ್ಛತಾ ಅಭಿಯಾನಕ್ಕೆ ಕಂಕನಾಡಿ ಓಲ್ಡ್ ರೋಡಿನಲ್ಲಿ ಅಧಿಕೃತ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮವನ್ನು ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಫಾ. ಜಾರ್ಜ್ ಜೀವನ್ ಸೀಕ್ವೇರಾ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಎಸ್. ಭೂಮರೆಡ್ಡಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಲಿಲಿಯಾ ಆರ್ಚ್ಡ್ ಸಂಸ್ಥೆಯ ಮಾಲೀಕರಾದ ಜೋಸೆಫ್ ಹಾಗೂ ಡಾ. ಶೇಷಪ್ಪ ಅಮೀನ್ ಅವರು ಉಪಸ್ಥಿತರಿದ್ದು ಸ್ವಯಂಸೇವಕರನ್ನು ಪ್ರೋತ್ಸಾಹಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಫಾ. ಜಾರ್ಜ್ ಜೀವನ್ ಸೀಕ್ವೇರಾ ಅವರು, “ಶಿಕ್ಷಿತರು ಕೂಡ ಕೆಲವೊಮ್ಮೆ ಪ್ಲಾಸ್ಟಿಕ್ ಬಳಕೆ ತಪ್ಪಿಸುವಂತಹ ಸರಳ ಜವಾಬ್ದಾರಿಗಳನ್ನು ಮರೆತು ಬಿಡುತ್ತಾರೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಬಗ್ಗೆ ನಾವು ಹೆಚ್ಚು ಗಮನ ಹರಿಸುವುದಿಲ್ಲ. ಈ ನಿಟ್ಟಿನಲ್ಲಿ ನಿರಂತರ ಜಾಗೃತಿ ಅಗತ್ಯವಿದೆ” ಎಂದು ತಿಳಿಸಿದರು. ಈ ಅಭಿಯಾನವನ್ನು ಕೈಗೊಂಡು ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸುತ್ತಿರುವ ರಾಮಕೃಷ್ಣ ಮಿಷನ್‌ನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅನಿಲ್ ಕುಮಾರ್ ಎಸ್. ಭೂಮರೆಡ್ಡಿ ಅವರು, “ಸ್ವಚ್ಛ ಮಂಗಳೂರು ಒಂದು ಸುಂದರ ಹಾಗೂ ಮೌಲ್ಯಾಧಾರಿತ ಪರಿಕಲ್ಪನೆ. ಇದು ‘ವಸುದೈವ ಕುಟುಂಭಕ’—ಒಂದು ಜಗತ್ತು, ಒಂದು ಕುಟುಂಬ ಎಂಬ ತತ್ವವನ್ನು ಪ್ರತಿಬಿಂಬಿಸುತ್ತದೆ. ಪ್ರಕೃತಿ ನಮಗೆ ಎಲ್ಲವನ್ನೂ ನೀಡುತ್ತಿದೆ. ಆದರೆ ನಾವು ಪ್ರಕೃತಿಗೆ ಏಕೆ ಕೃತಜ್ಞತಾಪೂರ್ವಕವಾಗಿ ಸೇವೆ ನೀಡುತ್ತಿಲ್ಲ? ಯುವಕರು ಇಂತಹ ಅಭಿಯಾನಗಳಲ್ಲಿ ಸೇರಿ ಸಕ್ರಿಯವಾಗಿ ಸೇವೆ ಸಲ್ಲಿಸಬೇಕು” ಎಂದು ಕರೆ ನೀಡಿದರು.
ವರದಿ: ಶಂಶೀರ್ ಬುಡೋಳಿ



