ನವದೆಹಲಿ : ವಿಪಕ್ಷಗಳು ನನ್ನ ಸಮಾಧಿ ಅಗೆಯಲು ಬಯಸಿವೆ. ನನ್ನ ಮೇಲೆ ಅವರಿಗೆ ಎಷ್ಟು ದ್ವೇಷವಿದೆ ಎಂಬುದು ಅವರ ಕಿರುಚಾಟದಿಂದಲೇ ಗೊತ್ತಾಗುತ್ತೆ ಎಂದ ಪ್ರಧಾನಿ ಮೋದಿ, ನೀವು ಎಷ್ಟೇ ಕಿರುಚಿದ್ರೂ ನನ್ನ ಸಮಾಧಿ ಅಗೆಯಲು ಸಾಧ್ಯವಿಲ್ಲ ಎಂದು ಗುಡುಗಿದರು.
ಈ ಬಗ್ಗೆ ರಾಷ್ಟ್ರಪತಿ ವಂದನಾ ನಿರ್ಣಯದ ಮೇಲೆ ಭಾಷಣ ಮಾಡಿದ ಪ್ರಧಾನಿಗಳು, ವಿರೋಧ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇದೇ ವೇಳೆ ಭಾರತ-ಅಮೆರಿಕ, ಭಾರತ-ಯುರೋಪ್ ಒಕ್ಕೂಟ ವ್ಯಾಪಾರ ಒಪ್ಪಂದಗಳು, ಆರ್ಥಿಕ ಬೆಳವಣಿಗೆ ಮತ್ತು ರಕ್ಷಣಾ ವಲಯದ ಬಲವರ್ಧನೆಗಾಗಿ ರಾಷ್ಟ್ರವನ್ನ ಶ್ಲಾಘಿಸಿದರು. ಎನ್‌ಡಿಎ ಸರ್ಕಾರ 18,000 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ಅಲ್ಲದೇ ಈ ಹಿಂದೆ ರಕ್ಷಣಾ ಪಡೆಗಳಿಗೆ ಅಗತ್ಯ ಉಪಕರಣಗಳೇ ಇರಲಿಲ್ಲ. ಆದ್ರೆ ಮೋದಿ ಸರ್ಕಾರವು ಸೈನಿಕರಿಗೆ ದೇಶದ ಸಂಪತ್ತನ್ನ ಮುಕ್ತವಾಗಿ ತೆರೆಯಿತು. ಅದಕ್ಕಾಗಿಯೇ ಅವರು ʻಮೋದಿಯ ಸಮಾಧಿʼ ಅಗೆಯಲು ಬಯಸುತ್ತಾರೆ ಎಂದು ಕುಟುಕಿದರು.
ಮುಂದುವರೆದು, ಸುಭದ್ರ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಒಪ್ಪಂದ ಎಂಬ ಪದವು ಬೋಫೋರ್ಸ್ ಅನ್ನು ಅರ್ಥೈಸುತ್ತದೆ. ಮತ್ತೊಂದು ಕಡೆ, ಟಿಎಂಸಿ ಅಂತಹ ಹೃದಯಹೀನ ಸರ್ಕಾರವು ಜನರ ಭವಿಷ್ಯವನ್ನೇ ಮುಳುಗಿಸುತ್ತಿದೆ. ಅತ್ಯಂತ ಶ್ರೀಮಂತ ರಾಷ್ಟ್ರಗಳೇ ನುಸುಳುಕೋರರನ್ನ ತೆಗೆದುಹಾಕುತ್ತಿರುವಾಗ ನಮ್ಮ ದೇಶದಲ್ಲಿ ಅಂಥವರನ್ನ ರಕ್ಷಿಸಲು ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ಇದರೊಂದಿಗೆ ನಮ್ಮ ಯುವಕರ ಉದ್ಯೋಗಗಳು ಮತ್ತು ಆದಿವಾಸಿ ಭೂಮಿಯನ್ನು ಕಸಿದುಕೊಳ್ಳುತ್ತಿವೆ ಎಂದು ಕಾಂಗ್ರೆಸ್ ಹಾಗೂ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಕಟು ಟೀಕೆ ಮಾಡಿದರು.
ಇನ್ನೂ ಪ್ರತಿಪಕ್ಷಗಳ ʻಕಬ್ರ್ ಖುದೇಗಿʼ ಹೇಳಿಕೆ ಉಲ್ಲೇಖಿಸಿ, ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಕಳ್ಳತನವೇ ಅವರ ಅಭ್ಯಾಸ ಎಂದು ವಾಗ್ದಾಳಿ ನಡೆಸಿದರು.
ಆ ಚೋರರು ಗುಜರಾತಿನ ಮಹಾತ್ಮಾ ಗಾಂಧಿಯವರ ಸರ್ ನೇಮ್ ಕದ್ದಿದ್ದಾರೆ ಎಂದು ಗಾಂಧಿ ಕುಟುಂಬವನ್ನ ಕುಟುಕಿದ ಮೋದಿ, ದೇಶವು ಕಾಂಗ್ರೆಸ್‌ನ ಮೊದಲ ಕುಟುಂಬಕ್ಕೆ ದಶಕಗಳಿಂದ ಅವಕಾಶ ನೀಡಿತು. ಆದರೆ ಅವರು ‘ಗರೀಬಿ ಹಠಾವೋ’ ಎಂಬ ಘೋಷಣೆಗಳ ಮೂಲಕ ಜನರನ್ನು ದಾರಿ ತಪ್ಪಿಸಿದ್ದರು ಎಂದು ಕಿಡಿಕಾರಿದರು.
ಇದಕ್ಕೂ ಮುನ್ನಾ ಕೇಂದ್ರ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು ಅವರನ್ನು ದೇಶದ್ರೋಹಿ ಎಂದು ಕರೆದ ರಾಹುಲ್ ಗಾಂಧಿ ವಿರುದ್ಧ ಲೋಕಸಭೆಯಲ್ಲಿ ವಾಗ್ದಾಳಿ ನಡೆಸಿದ ಮೋದಿ, ಅದು ಕಾಂಗ್ರೆಸ್ ಪಕ್ಷದಲ್ಲಿನ ಸಿಖ್ ವಿರೋಧಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ ಸಂಸದರ ಕುಟುಂಬವನ್ನು ಅವಮಾನಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ದ್ವೇಷ ಸ್ವೀಕಾರಾರ್ಹವಲ್ಲ. ನನ್ನ ದೇಶದ ಪ್ರಜೆಯನ್ನ ದೇಶದ್ರೋಹಿ ಅಂತ ಕರೆಯುವುದನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ? ಸಿಖ್ಖ್ ಅನ್ನೋ ಕಾರಣಕ್ಕೆ ದೇಶದ್ರೋಹಿ ಅನ್ನಬಹುದಾ ಅಂತಾ ರಾಹುಲ್ ಗಾಂಧಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.



