Thursday, February 12, 2026
Google search engine

Homeರಾಜಕೀಯಶಾಸಕ ಬೈರತಿ ಬಸವರಾಜು ವಿರುದ್ಧ ಸಿಐಡಿ ಲುಕೌಟ್‌ ನೋಟಿಸ್‌

ಶಾಸಕ ಬೈರತಿ ಬಸವರಾಜು ವಿರುದ್ಧ ಸಿಐಡಿ ಲುಕೌಟ್‌ ನೋಟಿಸ್‌

ಬೆಂಗಳೂರು : ರೌಡಿ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜು ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡಿದ್ದು, ಸಿಐಡಿ ಅಧಿಕಾರಿಗಳು ಅವರ ವಿರುದ್ಧ ಲುಕೌಟ್‌ ನೋಟಿಸ್‌ ಹೊರಡಿಸಿದ್ದಾರೆ.

ಇನ್ನೂ ಬೈರತಿ ಬಸವರಾಜು ಬಂಧನಕ್ಕೆ ಸಿಐಡಿ ವಿಶೇಷ ತಂಡಗಳನ್ನು ರಚಿಸಿದ್ದು, ಬೈರತಿ ಬಸವರಾಜು ಅವರು ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿರುವ ಶಂಕೆಯಿದೆ ಎನ್ನಲಾಗಿದ್ದು, ಸಿಐಡಿ ಪೊಲೀಸ್‌ ಅಧಿಕಾರಿಗಳು ಮಹಾರಾಷ್ಟ್ರದ ವಿವಿಧೆಡೆ ಪತ್ತೆ ಕಾರ್ಯ ಮುಂದುವರಿಸಿದ್ದಾರೆ. ಈ ಮಧ್ಯೆ ಬೈರತಿ ಬಸವರಾಜು ಅವರು ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಅವರ ವಿರುದ್ಧ ಲುಕೌಟ್‌ ನೋಟಿಸ್‌ ಹೊರಡಿಸಿದ್ದಾರೆ.

ಬೈರತಿ ಬಸವರಾಜು ಅವರು ಮಹಾರಾಷ್ಟ್ರದ ಪ್ರತಿಷ್ಠಿತ ಹೋಟೆಲ್‌ನಲ್ಲಿ ತಂಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಅವರನ್ನು ಬಂಧಿಸುವ ಉದ್ದೇಶಕ್ಕೆ ವಿಶೇಷ ತಂಡಗಳನ್ನು ಮಹಾರಾಷ್ಟ್ರಕ್ಕೆ ಕಳುಹಿಸಿದ್ದೇವೆ. ಅವರು ವಿದೇಶಕ್ಕೆ ಪರಾರಿಯಾಗದಂತೆ ತಡೆಯಲು ಲುಕ್‌ಔಟ್‌ ನೋಟಿಸ್‌ ಸಹ ಜಾರಿ ಮಾಡಿದ್ದು, ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಗೆ ಬೈರತಿ ಬಸವರಾಜು ಅವರ ಬಗ್ಗೆ ಫೋಟೊ ಸಮೇತ ಮಾಹಿತಿ ರವಾನಿಸಿದ್ದೇವೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಇನ್ನೂ ರೌಡಿ ಬಿಕ್ಲುಶಿವ ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು, ಕೊಲೆ ಪ್ರಕರಣ ಸಂಬಂಧ ಬೈರತಿ ಬಸವರಾಜು ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಅವರಾಗಿಯೇ ಬಂದು ಪೊಲೀಸರಿಗೆ ಶರಣಾದರೆ ಒಳ್ಳೆಯದು. ಇಲ್ಲವಾದರೆ ಪೊಲೀಸರು ಬಂಧಿಸುತ್ತಾರೆ ಎಂದು ಹೇಳಿದ್ದಾರೆ.

ಬೈರತಿ ಬಸವರಾಜು, 2025ರ ಡಿಸೆಂಬರ್‌ನಲ್ಲೂ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಆಗಲೂ ಹೈಕೋರ್ಟ್‌ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಸಿಐಡಿ ಪೊಲೀಸರು ಬೈರತಿ ಬಸವರಾಜುರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದರು. ಆಗಲೂ ಬೈರತಿ ಬಸವರಾಜು ತಲೆಮರೆಸಿಕೊಂಡಿದ್ದರು.

ಬಳಿಕ ಅವರು ಮತ್ತೊಮ್ಮೆ ಮೇಲ್ಮನವಿ ಸಲ್ಲಿಸಿದಾಗ ಹೈಕೋರ್ಟ್‌, ಶಾಸಕರ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಸೂಚಿಸಿ ಅಂತಿಮ ಆದೇಶ ಕಾಯ್ದಿರಿಸಿತ್ತು. ಇದೀಗ ಭೈರತಿ ಬಸವರಾಜ್ ಪ್ರಸ್ತುತ ನಿರೀಕ್ಷಣಾ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲೂ ಜಾಮೀನು ಸಿಗದಿದ್ದರೆ, ಅವರು ಶರಣಾಗುವುದು ಅನಿವಾರ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES
- Advertisment -
Google search engine

Most Popular