Thursday, February 19, 2026
Google search engine

Homeರಾಜ್ಯಸುದ್ದಿಜಾಲಯುವಕವಿಗಳಿಗೆ ಚೆನ್ನವೀರ ಕಣವಿಯವರ ಸಾಹಿತ್ಯ ಮಾರ್ಗದರ್ಶನ : ಸುರೇಶ್.ಎನ್ ಋಗ್ವೇದಿ

ಯುವಕವಿಗಳಿಗೆ ಚೆನ್ನವೀರ ಕಣವಿಯವರ ಸಾಹಿತ್ಯ ಮಾರ್ಗದರ್ಶನ : ಸುರೇಶ್.ಎನ್ ಋಗ್ವೇದಿ

ಚಾಮರಾಜನಗರ : ಸುನೀತಾ (ಸಾನೆಟ್)ಕವಿತೆಗಳ ರಚನೆಯಲ್ಲಿ ತೊಡಗಿರುವ ಯುವಕವಿಗಳಿಗೆ ಚೆನ್ನವೀರ ಕಣವಿಯವರ ಸಾಹಿತ್ಯದ ಪ್ರಭಾವ ಮಾರ್ಗದರ್ಶಕವಾಗಿ ಅನುಸರಿಸಬಹುದು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್.ಎನ್ ಋಗ್ವೇದಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಡಾ.ಚನ್ನವೀರ ಕಣವಿ ಹಾಗೂ ಡಾ.ಸಿದ್ದಲಿಂಗಯ್ಯನವರ ಸಾಹಿತ್ಯ ಕೊಡುಗೆಗಳ ಕುರಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಚನ್ನವೀರ ಕಣವಿಯವರು ಸಮನ್ವಯ ಸಾಹಿತ್ಯದ ಶ್ರೇಷ್ಠ ರಚನಾಕಾರರು. ತಮ್ಮ ಇಡೀ ಜೀವನವನ್ನು ಸಾಹಿತ್ಯ ಸೇವೆಯಲ್ಲಿ ತೊಡಗಿಸಿ ಅಪಾರವಾದ ಕೊಡುಗೆ ನೀಡಿದ ಕಣವಿಯವರು ಸೌಮ್ಯ ಮತ್ತು ಸಭ್ಯ ವ್ಯಕ್ತಿತ್ವ ಹೊಂದಿದವರು. 18 ಕವನ ಸಂಕಲನಗಳು, ಐದು ವಿಮರ್ಶಾ ಲೇಖನಗಳು, ಮಕ್ಕಳ ಸಂಕಲನ ಸಂಪಾದಿತ ಗ್ರಂಥಗಳನ್ನು ರಚಿಸಿದ ಮಹಾನ್ ವ್ಯಕ್ತಿ.

ಕನ್ನಡದಲ್ಲಿ ರೂಪ ಮತ್ತು ವಸ್ತು ವೈವಿಧ್ಯದಿಂದ ಕೂಡಿರುವ ಸುನೀತಾ ಗಳ ವಿಶೇಷ ಪ್ರಕಾರವನ್ನು ರಚಿಸಿದ ಕಣವಿಯವರು ತಮ್ಮದೇ ಆದ ಮೂಲ ಚಿಂತನೆ, ತತ್ವ ಜ್ಞಾನ, ಜೀವನದ ಭರವಸೆಗಳ ಅಂಶಗಳನ್ನು ಅವರ ಸಾಹಿತ್ಯದಲ್ಲಿ ಪ್ರಭಾವಿಸಿದ್ದಾರೆ. ಹಾಗೆಯೇ ಸಾಹಿತಿ ಡಾ.ಸಿದ್ದಲಿಂಗಯ್ಯನವರು ಸಾಮಾಜಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳಗಿಸಿದರು ಎಂದರು.

ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ವಿಚಂದ್ರ ಪ್ರಸಾದ್ ಮಾತನಾಡಿ, ಸಿದ್ದಲಿಂಗಯ್ಯನವರಿಗೆ ಚಾಮರಾಜನಗರದ ಒಡನಾಟ ಅಪಾರವಾಗಿತ್ತು. ಸಿದ್ದಲಿಂಗಯ್ಯನವರು ಸದಾ ಕಾಲ ಸೃಜನಾತ್ಮಕ ಸಾಹಿತ್ಯ ಹಾಗೂ ನೊಂದ ಜನರ ನೋವಿನ್ನು ಜಗತ್ತಿಗೆ ತಿಳಿಸಿದವರು. ಸಾಮಾಜಿಕ ಅವ್ಯವಸ್ಥೆಗಳನ್ನು ತಿದ್ದಿ, ಸಾಹಿತ್ಯದ ಮೂಲಕ ಬಹುಜನರ ಪ್ರಜ್ಞೆಯನ್ನು ಹೆಚ್ಚಿಸಿದರು. ಸಿದ್ದಲಿಂಗಯ್ಯನವರ ಸಾಹಿತ್ಯದಲ್ಲಿ ಬಡ ಹಾಗೂ ನೊಂದ ಜನರ ಜೀವಂತಿಕೆಯ ನೋವು ನಲಿವುಗಳನ್ನು ತಿಳಿಸಿದ್ದಾರೆ ಎಂದರು.

ಬರಹಗಾರ ಲಕ್ಷ್ಮಿ ನರಸಿಂಹ ಮಾತನಾಡಿ, ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಸಿದ್ಧಲಿಂಗಯ್ಯನವರು ಸರಸ್ವತಿಯ ಪುತ್ರರು. ಪ್ರಾಧ್ಯಾಪಕರಾಗಿ ಅಪಾರ ಶಿಷ್ಯರನ್ನು ಹೊಂದಿದ್ದ ಸಿದ್ಧಲಿಂಗಯ್ಯನವರು ನಾಡಿನ ಎಲ್ಲಡೆ ಅಭಿಮಾನದ ಸಾಹಿತ್ಯದ ಓದುಗರನ್ನು ಸೃಷ್ಟಿಸಿದರು ಎಂದರು.

ಕಾರ್ಯಕ್ರಮದಲ್ಲಿ ರವಿಚಂದ್ರಪ್ರಸಾದ್ ಕಹಳೆ ಹಾಗೂ ಶಿವಲಿಂಗ ಮೂರ್ತಿರವರು ಗೀತ ಗಾಯನವನ್ನು ನಡೆಸಿಕೊಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ಬಿಕೆ ಆರಾಧ್ಯ, ಪದ್ಮ ಪುರುಷೋತ್ತಮ್, ನಿವೃತ್ತ ಶಿಕ್ಷಕಿ ಸರಸ್ವತಿ, ಮನೋಜ್, ಕಿರಣ್ ಆದಿತ್ಯ, ಪ್ರಕಾಶ್, ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular