ಬೆಂಗಳೂರು : ಮುಂದಿನ ತಿಂಗಳು ರಾಜ್ಯದಲ್ಲಿ ಹೆಲ್ತ್ ಎಮರ್ಜೆನ್ಸಿ ಉಂಟಾಗುವ ಸಾಧ್ಯತೆಯಿದೆ. ರಾಜ್ಯ ಸರ್ಕಾರದ ವಿರುದ್ಧ ವೈದ್ಯರು ಸಿಡಿದೆದ್ದಿದ್ದಾರೆ. ಔಷಧ ಸರಬರಾಜು, ವೈದ್ಯರ ನೇಮಕ, ಬಡ್ತಿ ಸಹಿತ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ನಡೆಸಲು ಮುಂದಾಗಿದ್ದಾರೆ.
ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ ಮಾರ್ಚ್ 11 ರಿಂದ ಮುಷ್ಕರ ಆರಂಭಿಸಲಿದೆ. ಮಾರ್ಚ್ 11ರಿಂದ 15ರವರೆಗೆ ಎಲ್ಲಾ ಜಿಲ್ಲಾ ಆಸ್ಪತ್ರೆ ತಾಲೂಕಾಸ್ಪತ್ರೆ, ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಪ್ಪು ಪಟ್ಟಿ ಧರಿಸಿ ಮುಷ್ಕರ ನಡೆಸಲು ಮುಂದಾಗಿದ್ದಾರೆ.

ಈ ವೇಳೆ ಹೊರರೋಗಿಗಳ ಚಿಕಿತ್ಸೆ ಸ್ಥಗಿತಗೊಳಿಸಿ ತುರ್ತು ಸೇವೆ ಮಾತ್ರ ನೀಡಲು ನಿರ್ಧರಿಸಲಾಗಿದೆ. ಆನಂತರವೂ ಸರ್ಕಾರ ತಮ್ಮ ನಿಲುವಿನಲ್ಲಿ ಬದಲಾವಣೆ ಕಾಣದಿದ್ದರೆ ಮಾ.16ರಿಂದ ಗೈರಾಗುವ ಮೂಲಕ ಮುಷ್ಕರ ತೀವ್ರಗೊಳಿಸಲು ನಿರ್ಧರಿಸಲಾಗಿದೆ.
ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ.ರವೀಂದ್ರನಾಥ್ ಮೇಟಿ, ಸರಿಯಾಗಿ ನೇಮಕ, ವರ್ಗಾವಣೆ ಆಗುತ್ತಿಲ್ಲ. ಕಾಲಕಾಲಕ್ಕೆ ಔಷಧಗಳ ಪೂರೈಕೆಯಾಗಿಲ್ಲ. ಔಷಧಗಳು ಇಲ್ಲದಿದ್ದರೂ ಇದೆ ಅಂತ ತೋರಿಸಲಾಗುತ್ತಿದೆ. ಸರ್ಕಾರವೇ ತಂದ ನಿಯಮದ ಪ್ರಕಾರ ಚೀಟಿ ಹೊರಗೆ ಬರೆಯಬಾರದು, ಆದರೆ ಬರೆಯಲೇಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಪ್ರತಿಕ್ರಿಯಿಸಿ, ವೈದ್ಯರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಅಧಿಕಾರಿಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಹೋರಾಟಕ್ಕೆ ಬೆಂಬಲ ಇದೆ. ಅತಿದೊಡ್ಡ ಇಲಾಖೆಯ ಪೈಕಿ ಶಿಕ್ಷಣ ಇಲಾಖೆ ಬಳಿಕ ಆರೋಗ್ಯ ಇಲಾಖೆ ದೊಡ್ಡದು. ವೈದ್ಯರ ಬೇಡಿಕೆಗಳ ಈಡೇರಿಕೆಗೆ ಒತ್ತಾಯ ಮಾಡುತ್ತೇವೆ ಎಂದು ತಿಳಿಸಿದರು.



