ಸೈದಾಪುರ : ಆಧುನಿಕ ಸ್ಪರ್ಧಾತ್ಮಕ ತಂತ್ರಜ್ಞಾನದ ಯುಗದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರ ಭವಿಷ್ಯದ ಸಾಧನೆಗೆ ಗಣಕಯಂತ್ರ ಉತ್ತಮ ಸಾಧನವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಓರಡೀಯಾ ಅಭಿಪ್ರಾಯಪಟ್ಟರು.
ಈ ಬಗ್ಗೆ ಪಟ್ಟಣದ ಗ್ರಾಮ ಪಂಚಾಯಿತಿಯಲ್ಲಿ ಶಿಕ್ಷಣ ಫೌಂಡೇಶನ್, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಹಾಗೂ ಡೆಲ್ ಟೆಕ್ನಾಲಾಜಿ ಅವರ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಮಾದರಿ ಡಿಜಿಟಲ್ ಮಾಹಿತಿ ಕೇಂದ್ರದ ಉದ್ಘಾಟನೆ, ಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಯುವಕರು ತಮ್ಮ ಸ್ವ-ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ತಂತ್ರಜ್ಞಾನ ಕೌಶಲ್ಯಗಳನ್ನು ಪಡೆದುಕೊಳ್ಳುವುದಕ್ಕೆ ಅತ್ಯಂತ ಜಾಗೃತೆಯಿಂದ ಗಣಕಯಂತ್ರದ ಸದುಪಯೋಗವನ್ನು ಪಡೆದುಕೊಳ್ಳಬೇಕು. ಯಾರು ಕೂಡ ಇದನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು.
ಬಳಿಕ ಶಿಕ್ಷಣ ಫೌಂಡೇಶನ್‌ನ ಉತ್ತರ ಕರ್ನಾಟಕದ ವಲಯಾಧಿಕಾರಿ ಶರಣಪ್ಪ ಕಟ್ಟಿಮನಿ ಮಾತನಾಡಿ, ವೃತ್ತಿ ಮಾರ್ಗಗಳನ್ನು ಸಕ್ರಿಯೆಗೊಳಿಸುವ ನಿಟ್ಟಿನಲ್ಲಿ ಮತ್ತಷ್ಟು ಸಬಲರಾಗಲು ಪ್ರಕ್ರಿಯೆ ರೂಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಸರಳ ಡಿಜಿಟಲ್ ವಹಿವಾಟುಗಳಿಗಾಗಿ ಸ್ಮಾರ್ಟ್ ಫೋನ್ ಗಳಂತ ಡಿಜಿಟಲ್ ಸಾಧನಗಳನ್ನು ಆತ್ಮವಿಶ್ವಾಸದಿಂದ ಬಳಸಲು ಅಗತ್ಯವಿರುವ ಕೌಶಲ್ಯಗಳನ್ನು ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮದ ಮೂಲಕ ತರಬೇತಿ ನೀಡಲಾಗುತ್ತಿದೆ. ಇದರ ಉಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವಪ್ಪ ಬಾಬಳಗಿ, ಪಿಡಿಓ ವಿಜಯಲಕ್ಷ್ಮೀ ಪಾಟೀಲ್, ಮಾಜಿ ಗ್ರಾಂ.ಪಂ ಸದಸ್ಯ ಶರಣಪ್ಪ ಬೈರಂಕೊಂಡಿ, ಅರ್ಜುನ ಚವ್ಹಾಣ, ರಾಜು ದೊರೆ, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಸೇರಿದಂತೆ ಇತರರಿದ್ದರು.



