ಮಂಡ್ಯ : 2028 ಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು, ಹಾಗಾಗಿ ಹೈಕಮಾಂಡ್ ಮಧ್ಯಪ್ರವೇಶಿಸಿ ಕುರ್ಚಿ ಗೊಂದಲ ಬಗೆಹರಿಸಬೇಕು ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಒತ್ತಾಯಿಸಿದ್ದಾರೆ.
ಡಿಕೆ ಬೆಂಬಲಿಗ ಶಾಸಕರ ಡಿನ್ನರ್ ಮೀಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯದ ಕೆರಗೋಡು ಗ್ರಾಮದಲ್ಲಿ ಶಾಸಕರು ಪ್ರತಿಕ್ರಿಯೆ ನೀಡಿದ್ದು, ಬಾಲಕೃಷ್ಣ ಬರ್ತ್‌ಡೇ ಪ್ರಯುಕ್ತ ಊಟಕ್ಕೆ ಸೇರಿದ್ದೆವು. ಮಟನ್ ಬಿರಿಯಾನಿ, ನಾಟಿ ಸ್ಟೈಲ್ ಅಡುಗೆ ಮಾಡಿಸಿದ್ದರು, ಊಟ ಮಾಡಿದ್ದೇವೆ ಬಂದಿದ್ದೇವೆ. ಅಷ್ಟಕ್ಕೆಲ್ಲಾ ಏನೇನೋ ಊಹಾಪೋಹ ಸೃಷ್ಟಿಸಿದ್ದಾರೆ.
ನಮಗೆ ಸಿಎಂ, ಡಿಸಿಎಂ ಎಲ್ಲಾ ಒಂದೇ. ನಾನು ಸಿಎಂ ಪರಾನೂ ಇದ್ದೀನಿ, ಡಿಸಿಎಂ ಪರಾನೂ ಇದ್ದೀನಿ. 136 ಜನ ಶಾಸಕರು ಸಿಎಂ, ಡಿಸಿಎಂ ಪರ ಇದ್ದಾರೆ. ಆದರೆ ಡಿಕೆ ಶಿವಕುಮಾರ್ ಸಿಎಂ ಆಗಲಿ ಅನ್ನೋದು ನನ್ನ ವೈಯಕ್ತಿಕ ಆಸೆ ಎಂದು ಹೇಳಿದ್ದಾರೆ.
ಈಗಾಗಲೇ ಸಿದ್ದರಾಮಯ್ಯ, ಡಿಕೆಶಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದು, ಅದನ್ನೇ ನಾವು ಪುನರುಚ್ಚರಿಸಿ ಗೊಂದಲಕ್ಕೆ ತೆರೆ ಎಳೆಯಿರಿ ಎಂದು ಕೇಳುತ್ತಿದ್ದೇವೆ. ಪ್ರತಿನಿತ್ಯ ಡಿಕೆ ಸಿಎಂ ಆಗ್ತಾರೆ ಆಗಲ್ಲ ಅನ್ನೋ ಗೊಂದಲ ಎಳೆದುಕೊಂಡು ಹೋಗುತ್ತದೆ. ಇದರಿಂದ ಪಕ್ಷದ ವರ್ಚಸ್ಸಿಗೆ ಹಾನಿಯಾಗಲಿದೆ. ಹಾಗಾಗಿ ಹೈಕಮಾಂಡ್ ಒಂದು ನಿರ್ಧಾರ ಮಾಡಲಿ ಅನ್ನೋದು ನಮ್ಮೆಲ್ಲರ ಬೇಡಿಕೆ.
ಅಲ್ಲದೆ ರಾಜಕಾರಣಿಗಳು ಸೇರಿದಾಗ ರಾಜಕಾರಣವನ್ನೇ ಮಾತನಾಡಿದ್ದೇವೆ. ಕ್ಷೇತ್ರಗಳ ಅಭಿವೃದ್ಧಿ ಕುರಿತು ಚರ್ಚಿಸಿದ್ದೇವೆ. 2028 ಕ್ಕೂ ಕಾಂಗ್ರೆಸ್ ಬರಬೇಕು, ಹಾಗಾಗಿ ಹೈಕಮಾಂಡ್ ಮಧ್ಯಪ್ರವೇಶಿಸಿ ಗೊಂದಲ ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನೂ ಟೂರ್ ಹೋದ ಮಾತ್ರಕ್ಕೆ, ಊಟಕ್ಕೆ ಸೇರಿದ ಮಾತ್ರಕ್ಕೆ ಸಿಎಂ ಬದಲಾಗಲ್ಲ. ಶಾಸಕರು ಹೈಕಮಾಂಡ್ ಭೇಟಿ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ, ಅವಶ್ಯಕತೆ ಬಿದ್ದರೆ ಹೋಗುತ್ತೇವೆ ಎಂದಿದ್ದಾರೆ.



