ಚಾಮರಾಜನಗರ : ಭಾರತೀಯ ಧರ್ಮ ಮತ್ತು ಸಂಸ್ಕೃತಿ, ಸಾಹಿತ್ಯ ಮೌಲ್ಯಗಳನ್ನು ಉಳಿಸಿ ಬೆಳೆಸಿದ ಕೀರ್ತಿ ಜಗದ್ಗುರುಗಳಿಗೆ ಹಾಗೂ ಋಷಿ ಪರಂಪರೆಗೆ ಸಲ್ಲುತ್ತದೆ. ಭಾರತೀಯ ಸನಾತನ ಮೌಲ್ಯಗಳು ಉಳಿಯಲು ಜಗದ್ಗುರುಗಳ ನಿರಂತರ ಮಾರ್ಗದರ್ಶನವೇ ಕಾರಣ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಉಪನ್ಯಾಸಕರಾದ ಸುರೇಶ್.ಎನ್.ಋಗ್ವೇದಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಯುವ ಪರಿಷತ್ತು ಹಮ್ಮಿಕೊಂಡಿದ್ದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಹಾಗೂ ಮಾನವ ಧರ್ಮದ ಕೊಡುಗೆಗಳ ಕುರಿತು ಮಾತನಾಡುತ್ತಾ ಜಗದ್ಗುರು ಶ್ರೀ ರೇಣುಕಾಚಾರ್ಯರು ಭಕ್ತಿ, ಆಧ್ಯಾತ್ಮ ಮತ್ತು ತತ್ವಶಾಸ್ತ್ರದ ಮೂಲಕ ಶುದ್ಧ ಮನಸ್ಸಿನಿಂದ ಪೂಜಿಸಿ, ಸರ್ವರನ್ನು ಪ್ರೀತಿಸಿ. ಎಲ್ಲಾ ಜೀವಿಗಳಲ್ಲೂ ಶಿವನ ಅಂಶವಿದೆ. ಭಕ್ತಿ, ಜ್ಞಾನ, ಶೈವ ತತ್ವಗಳನ್ನು ವಚನಗಳ ಮೂಲಕ ತಿಳಿಸಿ ಕನ್ನಡದ ಶ್ರೇಷ್ಠ ಜಗದ್ಗುರುಗಳಾಗಿ ಮಾರ್ಗದರ್ಶನ ನೀಡಿ ಇಡೀ ಭಾರತದ ವಿವಿಧ ಕಡೆ ಮಠಗಳನ್ನು ಸ್ಥಾಪಿಸಿ ಮಾನವ ಕಲ್ಯಾಣಕ್ಕಾಗಿ ಶ್ರಮಿಸಿದವರು. ಸಮಾಜ ಸುಧಾರಣೆ, ಆಧ್ಯಾತ್ಮಿಕ ಅನುಭವದೊಂದಿಗೆ ಬದುಕು, ಅಂತರಾಳದ ಮೌಲ್ಯಗಳನ್ನು ಹೆಚ್ಚಿಸಿಕೊಂಡು ಮಾನವ ಧರ್ಮವನ್ನು ಉಳಿಸಿ ಬೆಳೆಸುವ ಪರಿಕಲ್ಪನೆಯನ್ನು ಬೆಳೆಸಿದ ಮಹಾನ್ ಗುರುಗಳು ಎಂದರು.
ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿದ ಯುವಶಕ್ತಿ ಪರಿಷತ್ತಿನ ಅಧ್ಯಕ್ಷರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಎಲ್.ಸುರೇಶ್ ಮಾತನಾಡಿ, ರೇಣುಕಾಚಾರ್ಯರ ಮಾನವ ಧರ್ಮದ ಕೊಡುಗೆಗಳು ವಿಶ್ವಕ್ಕೆ ಶಾಂತಿಯನ್ನು, ಮಾನವನಿಗೆ ಪ್ರೀತಿಯನ್ನು ದೊರಕಿಸುವ ದಿಕ್ಕಿನಲ್ಲಿ ಅವರ ಶ್ರೇಷ್ಠ ಮಾರ್ಗಗಳನ್ನು ಅರಿಯಬೇಕು. ರೇಣುಕಾಚಾರ್ಯರ ತತ್ವಶಾಸ್ತ್ರ, ಅಹಂ ಬ್ರಹ್ಮಾಸ್ಮಿ, ಶಿವೋಹಂ ತತ್ವ ಚಿಂತನೆಗಳು ನಮ್ಮೆಲ್ಲರಲ್ಲಿಯೂ ಕೂಡ ಪ್ರಭಾವ ಬೀರಲಿ. ಎಂದರಲ್ಲದೆ ನೈತಿಕ ಶುದ್ದಿ, ಶ್ರಮ ಮತ್ತು ಭಕ್ತಿಯ ಮೂಲಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಕನ್ನಡ ಸಾಹಿತ್ಯ ಪರಿಷತ್ತು ಮೊದಲ ಬಾರಿಗೆ ರೇಣುಕಾಚಾರ್ಯ ಜಯಂತಿಯನ್ನು ಆಚರಿಸುವ ಮೂಲಕ ಅವರ ವಚನ ಸಾಹಿತ್ಯ ಕೊಡುಗೆಗಳ ಕುರಿತು ಕಾರ್ಯಕ್ರಮ ರೂಪಿಸಿದ ಅಧ್ಯಕ್ಷರಾದ ಋಗ್ವೇದಿಯವರಿಗೆ ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಿದರು.
ಮಾಜಿ ನಗರಸಭಾ ಸದಸ್ಯರಾದ ಚಂದ್ರಶೇಖರ್ ಮಾತನಾಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸರ್ವ ಜನಾಂಗದ ಜಗದ್ಗುರುಗಳು ಚಿಂತಕರು, ಕವಿ ಶ್ರೇಷ್ಠರು, ಕನ್ನಡ ನಾಡು ನುಡಿ ಜಲ ಭಾಷೆಯ ಬಗ್ಗೆ ನಿರಂತರವಾದ ಕಾರ್ಯಕ್ರಮಗಳನ್ನು ಸಮಾಜದಲ್ಲಿ ಅರಿವಿನ ಕಾರ್ಯಕ್ರಮವನ್ನು, ಕನ್ನಡದ ಪ್ರೀತಿಯನ್ನು ಸದಾ ಕಾಲ ನಡೆಸಿಕೊಂಡು ಬರುತ್ತಿದ್ದಾರೆ ಎಂದರು.
ಉದ್ಯಮಿ ಶ್ರೀಮತಿ ರೇಖಾ ರವರು ಶ್ರೀ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ, ಜನಪದ ಕಲಾವಿದರಿಗೆ ಗೌರವ ಸನ್ಮಾನ ನೆರವೇರಿಸಿದರು.

ಕೊಂಬು ಕಹಳೆಯ ರವಿಚಂದ್ರಪ್ರಸಾದ್ ರವರನ್ನು ಇದೇ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಶ್ರೀವಿಜಯ ಕೃಷ್ಣ, ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಕನ್ನಯ್ಯ ಲಾಲ್ ಜೈನ್, ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ಜನಪದ ಕಲಾವಿದರಾದ ಶ್ರೀಮತಿ ಪುಟ್ಟಬಸಮ್ಮ, ಚಿಕ್ಕತಾಯಮ್ಮ, ಬಸಮ್ಮ, ಮಹದೇವಮ್ಮ, ಶಿವಮ್ಮ ಉಪಸ್ಥಿತರಿದ್ದರು.



