Sunday, May 3, 2026
Google search engine

Homeದೇಶಸಮುದ್ರದಾಳದಲ್ಲಿ ಅರಳಿದ ಬೃಹತ್ ಭಾರತ ಧ್ವಜ

ಸಮುದ್ರದಾಳದಲ್ಲಿ ಅರಳಿದ ಬೃಹತ್ ಭಾರತ ಧ್ವಜ

ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಶನಿವಾರ ಒಂದು ಐತಿಹಾಸಿಕ ದಾಖಲೆಯನ್ನು ನಿರ್ಮಿಸಲಾಯಿತು. ಸ್ವರಾಜ್ ದ್ವೀಪದ ರಾಧಾನಗರ ಬೀಚ್ ಬಳಿ ಬೃಹತ್ ಗಾತ್ರದ ಧ್ವಜವನ್ನು ಅರಳಿಸಲಾಗಿದ್ದು, ಸದ್ಯ ಇದು ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆದಿದ್ದು, ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.

ಸ್ಕ್ಯೂಬಾ ಡೈವಿಂಗ್ ಪ್ರದರ್ಶನ, ದ್ವೀಪಗಳನ್ನು ಜಾಗತಿಕ ಪರಿಸರ ಪ್ರವಾಸೋದ್ಯಮ ತಾಣವಾಗಿ ಗುರುತಿಸುವಂತೆ ಮಾಡಲು ಮಾಡಿರುವ ಈ ಸಾಧನೆಯು ಒಂದು ಹೆಮ್ಮೆಯ ಕ್ಷಣವಾಗಿದೆ. ಸುಮಾರು 200 ಸ್ಕ್ಯೂಬಾ ಡೈವರ್ ಗಳು ನೀರಿನೊಳಗೆ ಎರಡು ಅಸಾಧಾರಣ ವಿಶ್ವ ದಾಖಲೆ ಪ್ರಯತ್ನಗಳನ್ನು ಪೂರ್ಣಗೊಳಿಸಿದ್ದಾರೆ.

ತರಬೇತಿ ಪಡೆದ ಡೈವರ್‌ಗಳು ಮತ್ತು ಅಧಿಕಾರಿಗಳು ಶನಿವಾರ ನೀರಿನ ಅಡಿಯಲ್ಲಿ ಅತಿದೊಡ್ಡ ಭಾರತೀಯ ಧ್ವಜವನ್ನು ಅರಳಿಸಿದರು. ಸುಮಾರು 60X40 ಮೀಟರ್‌ಗಳ ಅಳತೆಯ ಬೃಹತ್ ತ್ರಿವರ್ಣ ಧ್ವಜವನ್ನು ರಾಧಾನಗರ ಬೀಚ್ ಬಳಿ ಸಮುದ್ರದ ಆಳದಲ್ಲಿ ಅರಳಿಸಲಾಯಿತು. ಇದು ನೀರೊಳಗಿನ ಸಂಶೋಧನೆ ಮತ್ತು ಸಂಘಟಿತ ಸಮುದ್ರ ಚಟುವಟಿಕೆಗಳಲ್ಲಿ ಭಾರತದ ಬೆಳವಣಿಗೆಯನ್ನು ಗುರುತಿಸಿತ್ತು.

ಸ್ವರಾಜ್ ದ್ವೀಪ ಜೆಟ್ಟಿಯ ಸಮೀಪದ ಲೈಟ್‌ಹೌಸ್ ಪ್ರದೇಶದ ಬಳಿ ಡೈವರ್‌ಗಳು ನೀರಿನ ಅಡಿಯಲ್ಲಿ ಅತಿ ಎತ್ತರದ ಮಾನವ ರಾಶಿಯನ್ನು ರೂಪಿಸಿ ಮತ್ತೊಂದು ಸಾಧನೆಯನ್ನು ಕೂಡ ಇದೇ ಸಂದರ್ಭದಲ್ಲಿ ಮಾಡಿದರು. ಇದು ಸುಮಾರು 10 ಮೀಟರ್‌ಗಳ ಎತ್ತರವನ್ನು ಹೊಂದಿತ್ತು. ಈ ಸಾಧನೆಗಾಗಿ ಹಲವು ತಿಂಗಳ ತಯಾರಿ, ವಿಶೇಷ ತರಬೇತಿ ಮತ್ತು ನೀರೊಳಗಿನ ಸುರಕ್ಷತಾ ಪ್ರೋಟೋಕಾಲ್‌ಗಳ ಕಟ್ಟುನಿಟ್ಟಾದ ಅನುಸರಣೆ ಅಗತ್ಯವಾಗಿತ್ತು. ಇದಕ್ಕಾಗಿ ಹಲವು ಸರ್ಕಾರಿ ಇಲಾಖೆಗಳು, ವೃತ್ತಿಪರ ಸ್ಕೂಬಾ ಬೋಧಕರು, ಸಮುದ್ರ ಸುರಕ್ಷತಾ ತಂಡಗಳು ಮತ್ತು ತಾಂತ್ರಿಕ ತಜ್ಞರ ಬೆಂಬಲವನ್ನು ಪಡೆಯಲಾಯಿತು.

ಈ ಸಾಧನೆಗೆ ಜಾಗತಿಕ ಮನ್ನಣೆ ಪಡೆಯಲು ಪ್ರತಿ ಹೆಜ್ಜೆಯಲ್ಲೂ ಅಂತಾರಾಷ್ಟ್ರೀಯ ಪರಿಶೀಲನಾ ಮಾನದಂಡಗಳನ್ನು ಅನುಸರಿಸುತ್ತಿರುವ ಬಗ್ಗೆ ಸಂಘಟಕರು ಖಚಿತಪಡಿಸಿಕೊಳ್ಳುತ್ತಿದ್ದರು. ಲೆಫ್ಟಿನೆಂಟ್ ಗವರ್ನರ್ ಡಿಕೆ ಜೋಶಿ ಅವರು ಕೂಡ ಡೈವಿಂಗ್ ಮತ್ತು ಆಚರಣೆಗಳಲ್ಲಿ ಭಾಗವಹಿಸಿದರು.

RELATED ARTICLES
- Advertisment -
Google search engine

Most Popular