ಮಂಡ್ಯ: ಖಾಸಗಿ ಶಾಲೆಗಳ ಅಬ್ಬರದ ನಡುವೆ ಸರ್ಕಾರಿ ಶಾಲೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದ ಹಳೆಯ ವಿದ್ಯಾರ್ಥಿಗಳು ನಾಡಿಗೆ ಮಾದರಿಯಾಗುವಂತಹ ಕೆಲಸ ಮಾಡಿದ್ದಾರೆ. ತಾವು ಅ ಆ ಇ ಈ ಕಲಿತ ‘ವಿದ್ಯಾ ದೇಗುಲ’ ಮುಚ್ಚುವ ಸ್ಥಿತಿಯಲ್ಲಿದ್ದನ್ನು ಕಂಡು ಮರುಗಿದ ಸುಮಾರು 600ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು, ಇಂದು ಶಾಲೆಯ ಚಿತ್ರಣವನ್ನೇ ಬದಲಿಸಿ ‘ಕಾಯಕಲ್ಪ’ ನೀಡಿದ್ದಾರೆ.
ಸಂಕಷ್ಟದಲ್ಲಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜು
ಕೆಸ್ತೂರಿನ ಈ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಒಂದು ಕಾಲದಲ್ಲಿ ನೂರಾರು ವಿದ್ಯಾರ್ಥಿಗಳಿಂದ ಕಳೆಗಟ್ಟುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಶಾಲೆಗಳ ವ್ಯಾಮೋಹದಿಂದಾಗಿ ದಾಖಲಾತಿ ಸಂಖ್ಯೆ ಕೇವಲ 37ಕ್ಕೆ ಕುಸಿದಿತ್ತು. ಸರ್ಕಾರದಿಂದ ನುರಿತ ಶಿಕ್ಷಕರು, ವಿಶಾಲವಾದ ಕ್ರೀಡಾಂಗಣ ಹಾಗೂ ಮೂಲಸೌಕರ್ಯಗಳಿದ್ದರೂ, ವಿದ್ಯಾರ್ಥಿಗಳ ಕೊರತೆಯಿಂದಾಗಿ ಶಾಲೆಗೆ ಬೀಗ ಬೀಳುವ ಆತಂಕ ಎದುರಾಗಿತ್ತು.
‘ನನ್ನ ಶಾಲೆ ನನ್ನ ಹೆಮ್ಮೆ’: ಹಳೆಯ ವಿದ್ಯಾರ್ಥಿಗಳ ಸಂಕಲ್ಪ
ತಮ್ಮ ಬಾಲ್ಯವನ್ನು ರೂಪಿಸಿದ ಶಾಲೆ ಸೊರಗುತ್ತಿರುವುದನ್ನು ಸಹಿಸದ ಹಳೆಯ ವಿದ್ಯಾರ್ಥಿಗಳು ಒಂದಾಗಿ ತಂಡ ರಚಿಸಿಕೊಂಡರು. “ಯಾವ ಸರ್ಕಾರಿ ಶಾಲೆಯಲ್ಲಿ ಓದಿ ನಾವು ಇಂದು ಉತ್ತಮ ಸ್ಥಿತಿಯಲ್ಲಿದ್ದೇವೆಯೋ, ಆ ಶಾಲೆ ಉಳಿಯಬೇಕು” ಎಂಬ ಛಲದೊಂದಿಗೆ ಕಾರ್ಯಪ್ರವೃತ್ತರಾದರು.
ಹಳೆಯ ವಿದ್ಯಾರ್ಥಿಗಳು ಮಾಡಿದ ಅಭಿವೃದ್ಧಿ ಕಾರ್ಯಗಳು ಹೀಗಿದೆ :
ಹೊಸ ಮೆರಗು: ಪಾಳುಬಿದ್ದಂತಿದ್ದ ಕಟ್ಟಡಕ್ಕೆ ಪ್ಲ್ಯಾಸ್ಟರಿಂಗ್ ಮಾಡಿಸಿ, ಆಕರ್ಷಕ ಬಣ್ಣ ಬಳಿಯುವ ಮೂಲಕ ಶಾಲೆಗೆ ಹೊಸ ಕಳೆ ನೀಡಿದ್ದಾರೆ.
ಮೂಲಸೌಕರ್ಯ: ಶಾಲಾ ಕಂಪೌಂಡ್ ದುರಸ್ತಿ, ಭವ್ಯವಾದ ಗೇಟ್ ಅಳವಡಿಕೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ತಾಂತ್ರಿಕ ಸ್ಪರ್ಶ: ಆಧುನಿಕ ಶಿಕ್ಷಣಕ್ಕೆ ಪೂರಕವಾಗಿ ಹೈಟೆಕ್ ಕಂಪ್ಯೂಟರ್ ಕೊಠಡಿಗಳನ್ನು ಸಿದ್ಧಪಡಿಸಿದ್ದಾರೆ.
ವಿದ್ಯುತ್ ಹಾಗೂ ಫ್ಲಾಟ್ ಫಾರಂ: ಇಡೀ ಶಾಲೆಗೆ ಸುಸಜ್ಜಿತ ವಿದ್ಯುತ್ ಸಂಪರ್ಕ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಫ್ಲಾಟ್ ಫಾರಂ ನಿರ್ಮಿಸಲಾಗಿದೆ.
ಮುಂದಿನ ಗುರಿ : ದಾಖಲಾತಿ ಹೆಚ್ಚಳ ಹಾಗೂ ಗುಣಮಟ್ಟದ ಶಿಕ್ಷಣ
ಬರಿ ಕಟ್ಟಡ ಅಷ್ಟೇ ಅಲ್ಲದೆ, ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹಳೆಯ ವಿದ್ಯಾರ್ಥಿಗಳ ಸಂಘ ಮುಂದಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಎರಡರಲ್ಲೂ ಬೋಧನೆ ಮಾಡುವಂತೆ ಶಿಕ್ಷಕರನ್ನು ಮನವೊಲಿಸಲಾಗಿದೆ.
“ಶಾಲೆಗೆ ದಾಖಲಾತಿ ಹೆಚ್ಚಾಗಬೇಕು ಮತ್ತು ಗ್ರಾಮೀಣ ಭಾಗದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗಬೇಕು ಎಂಬುದೇ ನಮ್ಮ ಉದ್ದೇಶ. ಶಾಲೆ ಶಿಥಿಲಗೊಂಡಿತ್ತು. ಈ ಶಾಲೆಗೆ ವಿದ್ಯಾರ್ಥಿಗಳನ್ನು ಸೇರಿಸಲು ಆಕರ್ಷಣೀಯವಾಗ ಮಾಡಬೇಕು ಎಂದು ಕೊಂಡ್ವಿ, ಹಳೆಯ ವಿದ್ಯಾರ್ಥಿಗಳ ಸಂಘ ಮಾಡಲು ತೀರ್ಮಾನಿಸಿ, ಹಳೆಯ ವಿದ್ಯಾರ್ಥಿಗಳ ಗುಂಪು ರಚಿಸಿ, ಶಾಲೆಯ ಸ್ಥಿತಿಗತಿ ತಿಳಿಸುವ ಕೆಲಸ ಮಾಡಿದೆವು, ಹಳೆಯ ವಿದ್ಯಾರ್ಥಿಗಳು ಹಣ ಜಮಾ ಮಾಡುವ ಕೆಲಸ ಮಾಡಿದರು. ಎಲ್ಲ ರೀತಿಯಿಂದಲೂ ಸಹಕಾರ ನೀಡಿದ್ದೇವೆ ಎನ್ನುತ್ತಾರೆ ಹಳೆಯ ವಿದ್ಯಾರ್ಥಿ ವಿನೋದ್ ಬಾಬು.
ಸರ್ಕಾರಿ ಶಾಲೆಯಲ್ಲಿ ಓದಿರುವ ಬಹುತೇಕ ಮಂದಿ ಈಗ ಸರ್ಕಾರಿ ಕೆಲಸದಲ್ಲಿದ್ದಾರೆ. ಕೆಸ್ತೂರು ಪ್ರೌಢ ಶಾಲೆ ಅಳುವಿನ ಹಂಚಿನಲ್ಲಿತ್ತು ಅದಕ್ಕೆ ಮರು ರೂಪ ಕೊಡುವ ಹಿನ್ನೆಲೆ ಎಲ್ಲಾ ಹಳೆ ವಿದ್ಯಾರ್ಥಿಗಳು ಸೇರಿ ಪುನಶ್ಚೇತನಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ ಹಳೆಯ ವಿದ್ಯಾರ್ಥಿಮೋಹನ.
ನಾನು ಈ ಶಾಲೆಯ ಹಳೆಯ ವಿದ್ಯಾರ್ಥಿ. ನಾನು ಒಂದು ಬಾರಿ ನಮ್ಮ ಶಾಲೆಗೆ ಭೇಟಿ ನೀಡಿದಾಗ ಶೀತಲ ವ್ಯವಸ್ಥೆಯನ್ನು ತಲುಪಿತ್ತು. ನಮ್ಮ ಎಲ್ಲಾ ಹಳೆಯ ವಿದ್ಯಾರ್ಥಿ ಸ್ನೇಹಿತರನ್ನು ಭೇಟಿ ಮಾಡಿ ಶಾಲೆಯನ್ನು ಪುನಶ್ಚೇತನ ಮಾಡಲು ನಿರ್ಧರಿಸಿದ್ದೆವು. ಸಾವಿರಾರು ಜನ ಕಲಿತು ಹೋಗಿರುವ ಶಾಲೆ ಮುಚ್ಚಬಾರದು ಎಂಬ ಉದ್ದೇಶದಿಂದ ಶಾಲೆಗೆ ಪುನಶ್ಚೇತನ ನೀಡಲು ಮುಂದಾಗಿದ್ದೇವೆ ಎನ್ನುತ್ತಾರೆ ಹಳೆಯ ವಿದ್ಯಾರ್ಥಿ ವಿನೋದ್ .
ಕರ್ನಾಟಕಕ್ಕೆ ಮಾದರಿಯಾದ ಕೆಸ್ತೂರು ತಂಡ
ಸರ್ಕಾರ ಮಾಡಬೇಕಾದ ಕೆಲಸವನ್ನು ಸ್ವಯಂಪ್ರೇರಿತರಾಗಿ ಹಳೆಯ ವಿದ್ಯಾರ್ಥಿಗಳೇ ಮಾಡಿ ತೋರಿಸಿರುವುದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ. “ಶಾಲೆ ಎಂದರೆ ಅದು ನಮ್ಮ ಮನೆ” ಎಂದು ಭಾವಿಸಿ ಕೆಲಸ ಮಾಡಿದ ಈ ಯುವಕರ ತಂಡಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ. ಕೆಸ್ತೂರಿನ ಈ ಕಾಯಕಲ್ಪವು ಇತರ ಗ್ರಾಮಗಳ ಹಳೆಯ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗುವುದರಲ್ಲಿ ಸಂಶಯವಿಲ್ಲ.



