Monday, June 22, 2026
Google search engine

Homeಸ್ಥಳೀಯಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗಾಭ್ಯಾಸದಲ್ಲಿ ನಿರತರಾದ ನಟ ದರ್ಶನ್

ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗಾಭ್ಯಾಸದಲ್ಲಿ ನಿರತರಾದ ನಟ ದರ್ಶನ್

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗಿದೆ. ಜೈಲಿನಲ್ಲಿ ಎಲ್ಲಾ ಕೈದಿಗಳಿಂದ ಯೋಗಭ್ಯಾಸ ಮಾಡಿಸಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಮುಂತಾದವರು ಯೋಗ ದಿನಾಚರಣೆಯಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದು, ಫೋಟೋ ಸೋಷಿಯಲ್ ಮೀಡಿಯಾ ತುಂಬಾ ವೈರಲ್ ಆಗಿದೆ.

ಕಾರಾಗೃಹದ ಎಲ್ಲಾ ಕೈದಿಗಳಿಗಾಗಿ ಸಾಮೂಹಿಕ ಯೋಗಾಭ್ಯಾಸ ಹಮ್ಮಿಕೊಳ್ಳಲಾಗಿತ್ತು. ತಮಗೆ ತೀವ್ರ ಬೆನ್ನು ನೋವಿನ ಸಮಸ್ಯೆ ಇದೆ ಎಂದು ಹೇಳಿದ್ದ ನಟ ದರ್ಶನ್, ಆರಂಭದಲ್ಲಿ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲು ನಿರಾಕರಿಸಿದ್ದರು.

ಆಗ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿ ಅಲೋಕ್ ಕುಮಾರ್ ದರ್ಶನ್ ಅವರನ್ನು ಕಚೇರಿಗೆ ಕರೆಸಿ ಮಾತನಾಡಿ ಬೆನ್ನು ನೋವಿನ ಸಮಸ್ಯೆ ಇದ್ದರೆ ಯೋಗ ಮಾಡುವುದರಿಂದಲೇ ಅದು ಗುಣವಾಗುತ್ತದೆ, ಆರೋಗ್ಯಕ್ಕೂ ತುಂಬಾ ಒಳ್ಳೆಯದು ಎಂದು ಮನವರಿಕೆ ಮಾಡಿ ಯೋಗಾಭ್ಯಾಸ ಮಾಡಿಸಿದರು ಎಂದು ತಿಳಿದುಬಂದಿದೆ.

ಡಿಜಿ ಅವರ ಸಲಹೆಯ ಬೆನ್ನಲ್ಲೇ ಯೋಗ ಮಾಡಲು ಒಪ್ಪಿದ ದರ್ಶನ್, ಜೈಲಿನ ಮುಖ್ಯ ಮೈದಾನದ ಸಾಮೂಹಿಕ ಯೋಗಕ್ಕೆ ಬಾರದೇ ಇದ್ದರೂ, ತಮ್ಮ ಬ್ಯಾರಕ್‌ನ ಕಾರಿಡಾರ್‌ನಲ್ಲಿಯೇ ಸಹ-ಆರೋಪಿಗಳೊಂದಿಗೆ ಯೋಗಾಭ್ಯಾಸ ನಡೆಸಿದರು.

ಸುಮಾರು ಒಂದು ಗಂಟೆಗಳ ಕಾಲ ನಡೆದ ಈ ಸೆಷನ್‌ನಲ್ಲಿ ದರ್ಶನ್ ಅವರು ಪ್ರಾಣಾಯಾಮ, ದೀರ್ಘದಂಡ ನಮಸ್ಕಾರ ಹಾಗೂ ಶವಾಸನ ಭಂಗಿಗಳನ್ನು ಮಾಡಿದರು. ಯೋಗ ಮುಗಿದ ಬಳಿಕ ದರ್ಶನ್ ಮತ್ತು ಅವರ ಗ್ಯಾಂಗ್ ಮರಳಿ ತಮ್ಮ ಬ್ಯಾರಕ್‌ಗಳಿಗೆ ತೆರಳಿದರು.

ಇದೇ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಪವಿತ್ರಾ ಗೌಡ ಅವರು ಮಹಿಳಾ ಕೈದಿಗಳ ವಿಭಾಗದಲ್ಲಿ ನಡೆದ ಸಾಮೂಹಿಕ ಯೋಗಾಭ್ಯಾಸದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಜೈಲಿನ ಇತರ ಮಹಿಳಾ ಕೈದಿಗಳ ಜೊತೆ ಸಾಲಿನಲ್ಲಿ ಕುಳಿತು ಪವಿತ್ರಾ ಗೌಡ ಅವರು ಯೋಗ ಮತ್ತು ಧ್ಯಾನ ಮಾಡಿದರು. ಪರಪ್ಪನ ಅಗ್ರಹಾರ ಜೈಲಿನ ಇತಿಹಾಸದಲ್ಲೇ ಹೈಪ್ರೊಫೈಲ್ ಕೈದಿಗಳು ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದು ಇದೇ ಮೊದಲು ಎನ್ನಲಾಗಿದೆ.

ಜೈಲು ಅಧಿಕಾರಿಗಳು ಕೈದಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಯೋಗ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಅನೇಕ ಕೈದಿಗಳು ವಿವಿಧ ಯೋಗಾಸನಗಳು ಹಾಗೂ ಪ್ರಾಣಾಯಾಮ ಅಭ್ಯಾಸಗಳಲ್ಲಿ ಭಾಗವಹಿಸಿದರು.

ದರ್ಶನ್ ಮತ್ತು ಪವಿತ್ರಾ ಗೌಡ ವಿರುದ್ಧದ ಆರೋಪಗಳು ಇನ್ನೂ ನ್ಯಾಯಾಲಯದ ವಿಚಾರಣೆಯಲ್ಲಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದ ಅಂತಿಮ ತೀರ್ಪು ಹೊರಬಂದಿಲ್ಲ.

RELATED ARTICLES
- Advertisment -
Google search engine

Most Popular