ಬೆಂಗಳೂರು : ಬಿಡದಿ ಟೌನ್ ಶಿಪ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಅನಿತಾ ಕುಮಾರಸ್ವಾಮಿ ಅವರ ಬಳಿ 100 ಎಕರೆ ಜಮೀನಿದೆ ಎಂದು ಹೇಳಿಕೆ ನೀಡಿದ್ದ ಸಚಿವ ಎಂ.ಬಿ ಪಾಟೀಲ್ ಅವರಿಗೆ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅನಿತಾ ಕುಮಾರಸ್ವಾಮಿ, ನನ್ನ ಹೆಸರಿನಲ್ಲಿರುವುದು 32 ಎಕರೆ ಜಮೀನು ಸಚಿವರಾದ ಎಂಬಿ ಪಾಟೀಲ್ ಹೇಳಿರುವಂತೆ 100 ಎಕರೆ ಅಲ್ಲ ರಾಜಕೀಯ ದುರುದ್ದೇಶಕ್ಕಾಗಿ ಮನೆಯವರನ್ನುಎಳೆದು ತಂದು ಸುಳ್ಳು ಪ್ರಚಾರ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಕುಟುಕಿದರು.

ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚಿಸುವ ಕೀಳು ಮಟ್ಟಕ್ಕೆ ಯಾರೂ ಹೋಗಬಾರದು. ಅನಗತ್ಯವಾಗಿ ನನ್ನ ಬಗ್ಗೆ, ನನ್ನ ಕುಟುಂಬದ ಕುರಿತು ಇಲ್ಲ ಸಲ್ಲದ ಆರೋಪಗಳನ್ನು ಮಾಡಿದರೆ ಕಾನೂನು ಮೂಲಕ ಅಂಥವರಿಗೆ ಉತ್ತರ ಕೊಡುತ್ತೇನೆ ಎಂದು ಅನಿತಾ ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದ್ದಾರೆ.



