Sunday, May 10, 2026
Google search engine

Homeದೇಶತಮಿಳುನಾಡಿನಲ್ಲಿ ದಳಪತಿ ಯುಗಾರಂಭ: ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ಸ್ವೀಕಾರ

ತಮಿಳುನಾಡಿನಲ್ಲಿ ದಳಪತಿ ಯುಗಾರಂಭ: ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ಸ್ವೀಕಾರ

ಚೆನ್ನೈ: ದಶಕಗಳ ಕಾಲ ತಮಿಳುನಾಡು ರಾಜ್ಯವನ್ನು ಆಳಿದ್ದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಪಕ್ಷಗಳ ದ್ವಿಪಕ್ಷೀಯ ಪ್ರಭುತ್ವಕ್ಕೆ ಅಂತಿಮ ಮೊಳೆ ಹೊಡೆದಿರುವ ನಟ, ದಳಪತಿ ವಿಜಯ್ ಇಂದು ತಮಿಳುನಾಡಿನ 24ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ತಮಿಳುನಾಡು ರಾಜಕೀಯ ಎಂದರೆ ಅದು ಕೇವಲ ಎರಡು ದ್ರಾವಿಡ ಪಕ್ಷಗಳ ನಡುವಿನ ಕದನ ಎಂಬಂತಾಗಿತ್ತು. ಆದರೆ, ಈ ಸಂಪ್ರದಾಯವನ್ನು ಮುರಿದು ‘ತಮಿಳಗ ವೆಟ್ರಿ ಕಳಗಂ’ (TVK) ಮೂಲಕ ವಿಜಯ್ ಹೊಸ ಇತಿಹಾಸ ಬರೆದಿದ್ದಾರೆ. 2026ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 234 ಕ್ಷೇತ್ರಗಳ ಪೈಕಿ ಮ್ಯಾಜಿಕ್ ಸಂಖ್ಯೆಯಾದ 118ನ್ನು ಮೀರಿ ಭರ್ಜರಿ ಜಯ ಸಾಧಿಸಿರುವುದು ವಿಜಯ್ ಅವರ ಜನಪ್ರಿಯತೆ ಮತ್ತು ಬದಲಾವಣೆಯ ಹಂಬಲಕ್ಕೆ ಸಾಕ್ಷಿಯಾಗಿದೆ.

ನೆಹರು ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಲಕ್ಷಾಂತರ ಅಭಿಮಾನಿಗಳ ಹರ್ಷೋದ್ಗಾರಗಳ ನಡುವೆ, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚಿತ್ರನಟಿ ತ್ರಿಶಾ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಗಣ್ಯರು ಸಾಕ್ಷಿಯಾದರು. ಯಾವುದೇ ಆಡಂಬರವಿಲ್ಲದೆ, ನೇರ ಮತ್ತು ಸ್ಪಷ್ಟ ನಡೆಗೆ ಹೆಸರಾದ ವಿಜಯ್, ಪ್ರಮಾಣವಚನ ಸ್ವೀಕರಿಸಿದ ರೀತಿ ಎಲ್ಲರ ಗಮನ ಸೆಳೆಯಿತು.

ಸಚಿವಾಲಯದ ರಚನೆಯಲ್ಲಿ ವಿಜಯ್ ಅಚ್ಚರಿಯ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಪ್ರಮುಖವಾಗಿ, ಉಪಮುಖ್ಯಮಂತ್ರಿ (DCM) ಹುದ್ದೆಯ ಬಗ್ಗೆ ಹರಿದಾಡುತ್ತಿದ್ದ ಎಲ್ಲಾ ವದಂತಿಗಳಿಗೆ ಅವರು ಪೂರ್ಣವಿರಾಮ ಇಟ್ಟಿದ್ದಾರೆ. ಮೈತ್ರಿ ಪಕ್ಷಗಳ ಒತ್ತಡವಿದ್ದರೂ, ಸದ್ಯಕ್ಕೆ ಯಾವುದೇ ಡಿಸಿಎಂ ಇಲ್ಲದೆ ಏಕಾಂಗಿಯಾಗಿ ಸಾರಥ್ಯ ವಹಿಸಲು ವಿಜಯ್ ನಿರ್ಧರಿಸಿದ್ದಾರೆ. ಅವರ ಸಂಪುಟದಲ್ಲಿ ಈ ಕೆಳಗಿನ ಒಂಬತ್ತು ಮಂದಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ:

1.ಎಸ್. ಕೀರ್ತನಾ, 2. ಕೆ.ಎ. ಸೆಂಗೊಟ್ಟೈಯನ್, 3. ಆಧವ್ ಅರ್ಜುನ್, 4. ಬಸ್ಸಿ ಆನಂದ್, 5. ಡಾ. ಅರುಣ್ ರಾಜ್‌, 6. ವೆಂಕಟರಮಣನ್‌, 7. ನಿರ್ಮಲ್‌ ಕುಮಾರ್‌, 8. ರಾಜ್‌ ಮೋಹನ್‌, ಮತ್ತು 9. ಡಾ. ಟಿ.ಕೆ. ಪ್ರಭು.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್ ಅವರಿಗೆ ಈಗ ದೊಡ್ಡ ಜವಾಬ್ದಾರಿಯಿದೆ. ಮೇ 13ರೊಳಗೆ ಅವರು ವಿಧಾನಸಭೆಯಲ್ಲಿ ತಮ್ಮ ಬಹುಮತವನ್ನು ಸಾಬೀತುಪಡಿಸಿ ವಿಶ್ವಾಸಮತ ಯಾಚಿಸಲಿದ್ದಾರೆ. ತಮಿಳುನಾಡು ಈಗ ದಳಪತಿಯ ಆಡಳಿತದಲ್ಲಿ ಹೊಸ ದಿಕ್ಕಿನತ್ತ ಸಾಗಲು ಸಜ್ಜಾಗಿದೆ. ಕೇವಲ ಸಿನಿಮಾ ಡೈಲಾಗ್‌ಗಳ ಮೂಲಕವಲ್ಲದೆ, ಜನಪರ ಯೋಜನೆಗಳ ಮೂಲಕ ವಿಜಯ್ ರಾಜ್ಯವನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬುದು ಇಡೀ ದೇಶದ ಕುತೂಹಲವಾಗಿದೆ.

    RELATED ARTICLES
    - Advertisment -
    Google search engine

    Most Popular