Saturday, July 11, 2026
Google search engine

Homeರಾಜಕೀಯಸಚಿವ ಸ್ಥಾನಕ್ಕಾಗಿ ಬೆಳಗಾವಿ ಕಾಂಗ್ರೆಸ್ ನಾಯಕರ ಕಸರತ್ತು ತೀವ್ರ

ಸಚಿವ ಸ್ಥಾನಕ್ಕಾಗಿ ಬೆಳಗಾವಿ ಕಾಂಗ್ರೆಸ್ ನಾಯಕರ ಕಸರತ್ತು ತೀವ್ರ

ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಕುರಿತು ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ಗಡಿ ಜಿಲ್ಲೆ ಬೆಳಗಾವಿಯ ಕಾಂಗ್ರೆಸ್ ಶಾಸಕರು ತಮ್ಮ ರಾಜಕೀಯ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದಾರೆ. ಅಲ್ಲದೆ ಜಿಲ್ಲೆಗೆ ಎರಡು ಅಲ್ಲ, ಕನಿಷ್ಠ ಮೂರು ಸಚಿವ ಸ್ಥಾನಗಳನ್ನು ನೀಡಬೇಕು ಎಂಬ ಬೇಡಿಕೆಯೊಂದಿಗೆ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಹೈಕಮಾಂಡ್ ಮೇಲೂ ಒತ್ತಡ ಹೆಚ್ಚಿಸಲು ಮುಂದಾಗಿದ್ದಾರೆ.

ಇನ್ನೂ ಬೆಳಗಾವಿ ಜಿಲ್ಲೆಗೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಾಲ್ಕು ಸಚಿವ ಸ್ಥಾನಗಳು ದೊರೆತಿದ್ದವು. ಅದೇ ಮಾನದಂಡದ ಆಧಾರದಲ್ಲಿ ಕಾಂಗ್ರೆಸ್ ಸರ್ಕಾರದಲ್ಲೂ ಕನಿಷ್ಠ ಮೂರು ಸಚಿವ ಸ್ಥಾನಗಳು ದೊರಕಬೇಕು ಎಂಬುದು ಸ್ಥಳೀಯ ಕಾಂಗ್ರೆಸ್ ನಾಯಕರ ವಾದವಾಗಿದ್ದು, ಈ ಬೇಡಿಕೆಯ ಹಿಂದೆ ರಾಜಕೀಯ ಸಮತೋಲನ ಹಾಗೂ ಜಿಲ್ಲೆಯ ಪ್ರಾತಿನಿಧ್ಯವನ್ನು ಬಲಪಡಿಸುವ ಉದ್ದೇಶವಿದೆ ಎನ್ನಲಾಗುತ್ತಿದೆ.

ರಾಜಕೀಯ ವಲಯದ ಮಾಹಿತಿ ಪ್ರಕಾರ, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಹಿರಿಯ ನಾಯಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಆದರೆ ಜಾತಿ ಸಮೀಕರಣ ಅಥವಾ ಹೈಕಮಾಂಡ್ ನಿರ್ಧಾರದಿಂದ ಸವದಿ ಅವರಿಗೆ ಅವಕಾಶ ಸಿಗದಿದ್ದರೆ, ತಮ್ಮ ಆಪ್ತರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ಕಲ್ಪಿಸುವ ಸಾಧ್ಯತೆಯೂ ಚರ್ಚೆಯಲ್ಲಿದೆ. ಲಿಂಗಾಯತ ಸಮುದಾಯ ಹಾಗೂ ಮಹಿಳಾ ಕೋಟಾದ ಲೆಕ್ಕಾಚಾರದಲ್ಲಿ ಹೆಬ್ಬಾಳ್ಕರ್ ಅವರಿಗೆ ಅವಕಾಶ ದೊರೆಯುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಇದರ ನಡುವೆ ಬೆಳಗಾವಿಗೆ ಮೂರು ಸಚಿವ ಸ್ಥಾನಗಳು ಸಿಗುವ ಸಾಧ್ಯತೆಗಳ ಕುರಿತು ಚರ್ಚೆಗಳು ಆರಂಭವಾಗುತ್ತಿದ್ದಂತೆಯೇ, ಜಿಲ್ಲೆಯ ಇತರೆ ಕಾಂಗ್ರೆಸ್ ಶಾಸಕರಾದ ಅಶೋಕ ಪಟ್ಟಣ್, ಮಹಾಂತೇಶ ಕೌಜಲಗಿ, ಗಣೇಶ ಹುಕ್ಕೇರಿ ಹಾಗೂ ಆಸೀಫ್ ಸೇಠ್ ಅವರ ರಾಜಕೀಯ ಲೆಕ್ಕಾಚಾರಗಳೂ ವೇಗ ಪಡೆದುಕೊಂಡಿವೆ. ಸಚಿವ ಸಂಪುಟ ವಿಸ್ತರಣೆ ಅಂತಿಮ ಹಂತ ತಲುಪುತ್ತಿದ್ದಂತೆ ಬೆಳಗಾವಿ ಜಿಲ್ಲೆಯ ನಾಯಕರು ತಮ್ಮ ಸ್ಥಾನವನ್ನು ಬಲಪಡಿಸಲು ವಿವಿಧ ಮಟ್ಟದಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ.

RELATED ARTICLES
- Advertisment -
Google search engine

Most Popular