Saturday, July 11, 2026
Google search engine

Homeರಾಜ್ಯಭಾನುವಾರವೂ ತೆರೆಯಲಿದೆ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳು : ಸರ್ವರ್‌ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ವಿಶೇಷ ಕ್ರಮ

ಭಾನುವಾರವೂ ತೆರೆಯಲಿದೆ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳು : ಸರ್ವರ್‌ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ವಿಶೇಷ ಕ್ರಮ

ಬೆಂಗಳೂರು : ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಜುಲೈ 12ರ ಭಾನುವಾರವೂ ರಾಜ್ಯದ ಎಲ್ಲಾ ಉಪ ನೋಂದಣಿ (ಸಬ್‌ ರಿಜಿಸ್ಟ್ರಾರ್‌) ಕಚೇರಿಗಳು ಕಾರ್ಯನಿರ್ವಹಿಸಲಿವೆ. ಸಾರ್ವಜನಿಕ ರಜೆ ಇದ್ದರೂ ಆಸ್ತಿ ನೋಂದಣಿ, ಮುದ್ರಾಂಕ (ಸ್ಟಾಂಪ್‌) ಖರೀದಿ ಸೇರಿದಂತೆ ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆಯ ಎಲ್ಲಾ ಸೇವೆಗಳು ಎಂದಿನಂತೆ ಲಭ್ಯವಿರಲಿವೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ರಾಜ್ಯದ ಹಲವು ಉಪ ನೋಂದಣಿ ಕಚೇರಿಗಳಲ್ಲಿ ಕಾವೇರಿ–2 ತಂತ್ರಾಂಶದಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಯಿಂದ ನೋಂದಣಿ ಪ್ರಕ್ರಿಯೆ ವಿಳಂಬವಾಗಿದ್ದು, ಸಾರ್ವಜನಿಕರು ಹಾಗೂ ರಿಯಲ್‌ ಎಸ್ಟೇಟ್‌ ವಲಯದವರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆ ಕಾರ್ಯದೊತ್ತಡವನ್ನು ಕಡಿಮೆ ಮಾಡಿ, ಬಾಕಿ ಉಳಿದಿರುವ ನೋಂದಣಿ ಪ್ರಕ್ರಿಯೆಗಳನ್ನು ವೇಗಗೊಳಿಸುವ ಉದ್ದೇಶದಿಂದ ಭಾನುವಾರವೂ ಕಚೇರಿಗಳನ್ನು ತೆರೆಯುವ ನಿರ್ಧಾರ ಕೈಗೊಳ್ಳಲಾಗಿದೆ.

ಅಲ್ಲದೆ ಕಳೆದ ಒಂದು ವಾರದಿಂದ ರಾಜ್ಯದ ಹಲವು ಜಿಲ್ಲೆಗಳು ಹಾಗೂ ತಾಲೂಕು ಕೇಂದ್ರಗಳ ಉಪ ನೋಂದಣಿ ಕಚೇರಿಗಳಲ್ಲಿ ಸರ್ವರ್‌ ಸಮಸ್ಯೆ ಉಂಟಾಗಿರುವುದರಿಂದ ಮನೆ, ನಿವೇಶನ ಹಾಗೂ ಜಮೀನುಗಳ ಖರೀದಿ–ಮಾರಾಟ ನೋಂದಣಿ ಕಾರ್ಯಗಳು ವಿಳಂಬಗೊಂಡಿದ್ದು, ಇದರಿಂದ ಸಾರ್ವಜನಿಕರು ಕಚೇರಿಗಳಿಗೆ ಪದೇಪದೇ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಅಲ್ಲದೆ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೂ ಪರಿಣಾಮ ಬೀರಿದೆ.

ಇನ್ನೂ ಸರ್ವರ್‌ ಸಮಸ್ಯೆಯಿಂದ ರಾಜ್ಯ ಸರ್ಕಾರಕ್ಕೂ ಸ್ಟಾಂಪ್‌ ಡ್ಯೂಟಿ ಸಂಗ್ರಹದಲ್ಲಿ ನಷ್ಟ ಉಂಟಾಗುತ್ತಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ತಾಂತ್ರಿಕ ದೋಷವನ್ನು ಶೀಘ್ರ ಸರಿಪಡಿಸಿ, ನೋಂದಣಿ ಸೇವೆಗಳನ್ನು ಸಂಪೂರ್ಣವಾಗಿ ಸಾಮಾನ್ಯ ಸ್ಥಿತಿಗೆ ತರಲು ಇಲಾಖೆ ಕ್ರಮ ಕೈಗೊಂಡಿದೆ. ಈ ಕುರಿತು ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆಯು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಭಾನುವಾರದ ವಿಶೇಷ ಸೇವೆಯ ಪ್ರಯೋಜನವನ್ನು ಪಡೆದು ಸಾರ್ವಜನಿಕರು ತಮ್ಮ ನೋಂದಣಿ ಸಂಬಂಧಿತ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳುವಂತೆ ಮನವಿ ಮಾಡಿದೆ.

RELATED ARTICLES
- Advertisment -
Google search engine

Most Popular