ಬೆಂಗಳೂರು : ಸಿಲಿಕಾನ್ ಸಿಟಿಯ ಅತ್ಯಂತ ಜನದಟ್ಟಣೆಯ ಪ್ರದೇಶವಾದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ನಿರ್ಮಿಸಲಾಗಿರುವ ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಇದೀಗ ಸಂಚಾರಕ್ಕೆ ಮುಕ್ತವಾಗಿದ್ದು, ಈ ಮೂಲಕ ದಕ್ಷಿಣ ಬೆಂಗಳೂರಿನ ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆಯಾಗಿದೆ.
ಈ ಫ್ಲೈಓವರ್‌ನ ಕೆಳಗಿನ ಹಂತದಲ್ಲಿ ಬಿಎಂಆರ್‌ಸಿಎಲ್‌ನ ನಮ್ಮ ಮೆಟ್ರೋ ರೈಲು ಸಂಚರಿಸಲಿದ್ದರೆ, ಮೇಲಿನ ಹಂತದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ವರೆಗಿನ ಸುಮಾರು 3.35 ಕಿ.ಮೀ ಉದ್ದದ ಈ ಫ್ಲೈಓವರ್, ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಅನುಭವಿಸುತ್ತಿದ್ದ ಗಂಟೆಗಟ್ಟಲೆ ಟ್ರಾಫಿಕ್ ಕಿರಿಕಿರಿಗೆ ಮುಕ್ತಿ ನೀಡಲಿದೆ. ಇನ್ನು ಈ ಫ್ಲೈಓವರ್ ಬಳಕೆಯಿಂದ ಬಿಟಿಎಂ ಲೇಔಟ್, ಮಡಿವಾಳ ಮತ್ತು ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಪ್ರಯಾಣಿಸುವವರು ಯಾವುದೇ ಸಿಗ್ನಲ್ ಇಲ್ಲದೆ ವೇಗವಾಗಿ ಸಾಗಬಹುದಾಗಿದೆ.
ಈ ಫ್ಲೈಓವರ್ ಮೂಲಕ ಐಟಿ ಉದ್ಯೋಗಿಗಳು ಮತ್ತು ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಹೋಗುವ ಸಾವಿರಾರು ವಾಹನ ಸವಾರರಿಗೆ ಸಮಯ ಉಳಿತಾಯವಾಗಲಿದೆ. ಮೆಟ್ರೋ ಮತ್ತು ರಸ್ತೆ ಸಾರಿಗೆ ಎರಡನ್ನೂ ಒಂದೇ ಮಾರ್ಗದಲ್ಲಿ ಅಳವಡಿಸಿರುವುದು ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ರೂಪ ನೀಡಿದೆ.
ರಸ್ತೆಯಿಂದ ಸುಮಾರು 8 ಮೀಟರ್ ಎತ್ತರ : ಈ ಫ್ಲೈಓವರ್ ವಿಶೇಷ ವಿನ್ಯಾಸವು ನಗರಾಭಿವೃದ್ಧಿಯಲ್ಲೊಂದು ಮಹತ್ವದ ಮೈಲುಗಲ್ಲಾಗಿದ್ದು, ಇದರ ಕೆಳಮಟ್ಟದ ಡೆಕ್ (ರಸ್ತೆಯಿಂದ ಸುಮಾರು 8 ಮೀಟರ್ ಎತ್ತರ) ವಾಹನ ಸಂಚಾರಕ್ಕೆ ಮೀಸಲಾಗಿದ್ದು, ಮೇಲ್ಮಟ್ಟದ ಡೆಕ್ (ಸುಮಾರು 16 ಮೀಟರ್ ಎತ್ತರ) ನಮ್ಮ ಮೆಟ್ರೋ ರೈಲುಗಳ ಸಂಚಾರಕ್ಕೆ ವಿನ್ಯಾಸಗೊಳಿಸಲಾಗಿದೆ.
ಇದೇ ಮಾದರಿಯ ಡಬಲ್ ಡೆಕ್ಕರ್ ವ್ಯವಸ್ಥೆಯನ್ನು ಮುಂಚೆಯೇ ಜೈಪುರ, ನಾಗ್ಪುರ ಹಾಗೂ ಮುಂಬೈ ನಗರಗಳಲ್ಲಿ ಅಳವಡಿಸಲಾಗಿದ್ದು, ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಜಾರಿಗೆ ಬಂದಿದ್ದು, ಈ ಮೇಲ್ಸೇತುವೆಯ ಮೂಲಕ ಎಚ್‌ಎಸ್‌ಆರ್ ಲೇಔಟ್ ಮತ್ತು ಹೊಸೂರು ರಸ್ತೆಯ ನಡುವೆ ಸಿಗ್ನಲ್ ರಹಿತ ಪ್ರಯಾಣ ಸಾಧ್ಯವಾಗಿದ್ದು, ವಿಶೇಷವಾಗಿ ಪೀಕ್ ಅವರ್‌ಗಳಲ್ಲಿ ಪ್ರಯಾಣದ ಸಮಯದಲ್ಲಿ ಶೇಕಡಾ 30ರಷ್ಟು ಉಳಿತಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಲ್ಕ್ ಬೋರ್ಡ್ ಪ್ರದೇಶದಲ್ಲಿ ವರ್ಷಗಳಿಂದಲೂ ಮುಂದುವರಿದ ಟ್ರಾಫಿಕ್ ಸಮಸ್ಯೆಗೆ ಇದು ದೀರ್ಘಕಾಲೀನ ಪರಿಹಾರ ನೀಡುವ ನಿರೀಕ್ಷೆ ಮೂಡಿಸಿದೆ.



