Monday, May 4, 2026
Google search engine

Homeರಾಜಕೀಯಬಿಜೆಪಿ ಗೆಲುವು: ಮೈಸೂರಲ್ಲಿ ಸಂಭ್ರಮಾಚರಣೆ

ಬಿಜೆಪಿ ಗೆಲುವು: ಮೈಸೂರಲ್ಲಿ ಸಂಭ್ರಮಾಚರಣೆ

ಮೈಸೂರು: ಪಶ್ಚಿಮ ಬಂಗಾಳ ಸೇರಿ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲ ಬಾರಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಮಮತಾ ಬ್ಯಾನರ್ಜಿಯವರ 15 ವರ್ಷಗಳ ದುರಾಡಳಿತ ಅಂತ್ಯಗೊಂಡಿದೆ. ಸಂವಿಧಾನ ವಿರೋಧಿಯಾಗಿ ನಡೆದುಕೊಂಡ ಮಮತಾ ಬ್ಯಾನರ್ಜಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಜೊತೆಗೆ ಲಕ್ಷಾಂತರ ಕಾರ್ಯಕರ್ತರು ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ. ಅಸ್ಸಾಂ ಮತ್ತು ಪುದುಚೇರಿಯಲ್ಲೂ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಮಮತಾ ಬ್ಯಾನರ್ಜಿ ಮಹಿಳಾ ಮೀಸಲಾತಿ ವಿರೋಧಿಸಿದ್ದ ಫಲ ಇದಾಗಿದೆ. ತನಿಖಾಧಿಕಾರಿ, ಚುನಾವಣಾಧಿಕಾರಿ ಹಾಗೂ ನ್ಯಾಯಾಮೂರ್ತಿಗಳಿಗೂ ಬೆಲೆ ನೀಡದೇ ಎಕಮುಖ ಧೋರಣೆ ತೋರಿದ್ದಕ್ಕೆ ಜನತೆಯೇ ಅವರಿಗೆ ತಕ್ಕಪಾಠ ಕಲಿಸಿದ್ದಾರೆಂದರು.

ಪಶ್ಚಿಮ ಬಂಗಾಳದಂತೆ ಕರ್ನಾಟದಲ್ಲೂ ಕಾಂಗ್ರೆಸ್ ದುರಾಡಳಿತ ನಡೆಸುತ್ತಿದೆ. ಮುಂಬರುವ ಕರ್ನಾಟಕದ ಚುನಾವಣೆಯಲ್ಲೂ ಪಶ್ಚಿಮ ಬಂಗಾಳದ ಮಾದರಿಯಲ್ಲೇ ಫಲಿತಾಂಶ ಬರಲಿದೆ. ರಾಜ್ಯದಲ್ಲೂ ದುರಾಡಳಿತ ಮಿತಿಮೀರಿದೆ. ಎರಡು ಕ್ಷೇತ್ರಗಳ ಉಪ‌ಚುನಾವಣೆಯಲ್ಲಿ ಅನುಕಂಪ ಕೆಲಸ ಮಾಡಿದೆ. ಉಪ‌ ಚುನಾವಣೆಯಲ್ಲಿ ಮತದಾರರು ಆಡಳಿತಾರೂಢ ಪಕ್ಷಕ್ಕೆ ಮತಹಾಕುವುದು ವಾಡಿಕೆ. ನಾವು ಅಧಿಕಾರದಲ್ಲಿದ್ದಾಗ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಎರಡು ಕ್ಷೇತ್ರಗಳ ಉಪ‌ ಚುನಾವಣೆಯಲ್ಲಿ ಅದು ಮರುಕಳಿಸಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲು ಕಾಣಲಿದೆ ಎಂದರು.

ಬಿಜೆಪಿ ನಗರಾಧ್ಯಕ್ಷ ಎಲ್‌.ನಾಗೇಂದ್ರ ಮಾತನಾಡಿ, ನಿರೀಕ್ಷೆಗೂ ಮೀರಿದ ಗೆಲುವು ಇದಾಗಿದೆ. ಇದೊಂದು ಐತಿಹಾಸಿಕ ರಾಜಕೀಯ ಬದಲಾವಣೆಯಾಗಿದ್ದು, ಮತದಾರರ ಅಭಿಪ್ರಾಯ ಬಿಜೆಪಿ ಪರವಾಗಿ ಎಂಬ ಫಲಿತಾಂಶ ಬಂದಿದೆ. ರಾಜ್ಯ ರಾಜಕೀಯದಲ್ಲಿಯೂ ಮುಂದಿನ ದಿನಗಳಲ್ಲಿ ಬದಲಾವಣೆಗಳಾಗಲು ಇದು ಸಂಕೇತವಾಗಿದೆ. ಹಿಂದೂಗಳು, ಮಹಿಳೆಯರಿಗೆ ತೊಂದರೆ ನೀಡುತ್ತಿದ್ದ ಮಮತಾ ಬ್ಯಾನರ್ಜಿ ದುರಾಡಳಿತ ಅಂತ್ಯವಾಗಿದೆ. ೨೦೨೮ರ ಚುನಾವಣೆಗೆ ಇದು ದಿಕ್ಸೂಚಿಯಾಗಿದೆ. ಪಾಂಡಿಚೇರಿ, ಅಸ್ಸಾಂನಲ್ಲಿಯೂ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿರುವುದು ನಮ್ಮೆಲ್ಲರ ರಾಷ್ಟ್ರೀಯ ನಾಯಕರ ಶ್ರಮ ಎಂದರು.

ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಎನ್‌.ಸುಬ್ಬಣ್ಣ ಮಾತನಾಡಿ, ಮೂರು ರಾಜ್ಯಗಳಲ್ಲಿಯೂ ಬಿಜೆಪಿ ಜಯಭೇರಿ ಭಾರಿಸಿದೆ. ಅದರಲ್ಲೂ ತಮಿಳುನಾಡಿನಲ್ಲಿ ಹಿಂದೂ ವ್ಯವಸ್ಥೆಯನ್ನು ಟೀಕೆ ಮಾಡುತ್ತಿದ್ದ ಸ್ಟಾಲಿನ್‌ ಸೋಲು ಸ್ವಾಗತಿಸುತ್ತೇವೆ. ಮುಂಬರ ಚುನಾವಣೆಗಳಿಗೆ ಈ ಫಲಿತಾಂಶಗಳು ದಿಕ್ಸೂಚಿಯಾಗಿದೆ ಎಂದು ಹೇಳಿದರು.

ಬಿಜೆಪಿ ಗ್ರಾಮಾಂತರ ಮಾಜಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್‌, ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್‌ಗೌಡ, ಮೈಮುಲ್‌ ನಿರ್ದೇಶಕ ಸದಾನಂದ, ಬಿಜೆಪಿ ವಕ್ತಾರ ಕೆ.ವಸಂತ್‌ಕುಮಾರ್‌, ಮುಖಂಡರಾದ ಡಾ.ಈ.ಸಿ.ನಿಂಗರಾಜೇಗೌಡ, ಎಂ.ಅಪ್ಪಣ್ಣ, ನಗರವಕ್ತಾರ ಎಂ.ಮೋಹನ್‌, ಮಹೇಶ್‌ ರಾಜೇ ಅರಸ್‌, ಬಿ.ಎಂ.ಸಂತೋಷ್‌ ಕುಮಾರ್‌, ಮುಖಂಡರಾದ ಪುನೀತ್‌ಗೌಡ, ದೇವರಾಜ್‌, ಪ್ರದೀಪಕುಮಾರ್‌, ಡಿ.ಲೋಹಿತ್‌, ಶಿವರಾಜ್‌, ಗಿರಿಗೌಡ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular