ಬೆಂಗಳೂರು : ಕಳೆದ ಏಪ್ರಿಲ್ 29ರಂದು ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಏಳು ಮಂದಿ ಸಾವನ್ನಪ್ಪಿದ ದುರ್ಘಟನೆಗೆ ಗ್ರೇಟರ್ ಬೆಂಗಳೂರು ಅಥಾರಿಟಿ ಮತ್ತು ಅಂದಿನ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ಲೋಕಾಯುಕ್ತ ತನಿಖಾ ವರದಿ ಬಹಿರಂಗಪಡಿಸಿದೆ.
ಜಿಬಿಎ ಅಧಿಕಾರಿಗಳು ಪಾದಚಾರಿ ಮಾರ್ಗದ ಒತ್ತುವರಿಯನ್ನು ಸಮಯಕ್ಕೆ ತೆರವುಗೊಳಿಸಿದ್ದರೆ ಹಾಗೂ ಬಿಬಿಎಂಪಿ ಶಿಥಿಲಗೊಂಡಿದ್ದ ಕಾಂಪೌಂಡ್ ಗೋಡೆಯನ್ನು ದುರಸ್ತಿ ಮಾಡಿದ್ದರೆ ಈ ದುರಂತ ತಪ್ಪಿಸಬಹುದಾಗಿತ್ತು ಎಂದು ಕರ್ನಾಟಕ ಲೋಕಾಯುಕ್ತ ಎಸ್‌ಪಿ ನೇತೃತ್ವದ ತನಿಖಾ ತಂಡ ವರದಿ ಸಲ್ಲಿಸಿದ್ದು, ಈ ವರದಿಯನ್ನು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರ ಮುಂದೆ ನಡೆದ ವಿಚಾರಣೆಯಲ್ಲಿ ಮಂಡಿಸಲಾಯಿತು. ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ತನಿಖೆಯಲ್ಲಿ ಗೋಡೆಯ ನಿರ್ಮಾಣದಲ್ಲಿ ಗಂಭೀರ ತಾಂತ್ರಿಕ ದೋಷಗಳು ಬೆಳಕಿಗೆ ಬಂದಿವೆ. ಭಾರತೀಯ ಕಟ್ಟಡ ನಿಯಮಾವಳಿಗಳ ಪ್ರಕಾರ ಕಾಂಪೌಂಡ್ ಗೋಡೆಯ ಎತ್ತರ 1.5ರಿಂದ 2.4 ಮೀಟರ್ ಒಳಗಿರಬೇಕು. ಆದರೆ ಬೌರಿಂಗ್ ಆಸ್ಪತ್ರೆಯ ಗೋಡೆ 2.8 ಮೀಟರ್ ಎತ್ತರದಲ್ಲಿತ್ತು. ಮಳೆನೀರು ಹರಿದು ಹೋಗಲು ಅಗತ್ಯವಾದ ‘ವೀಪ್ ಹೋಲ್ಸ್’ ಅಥವಾ ಭದ್ರತಾ ತಾಂತ್ರಿಕ ವ್ಯವಸ್ಥೆಯೂ ಇರಲಿಲ್ಲ ಎಂದು ವರದಿ ತಿಳಿಸಿದೆ.
ಇನ್ನು 2008-09ರಲ್ಲಿ ಲಾರಿ ಡಿಕ್ಕಿಯಿಂದ ಗೋಡೆಗೆ ಹಾನಿಯಾಗಿದ್ದರೂ, ನಂತರ ದುರಸ್ತಿ ಕಾರ್ಯ ನಡೆದಿರಲಿಲ್ಲ. ಅಲ್ಲದೆ 2018-19ರಲ್ಲಿ ಕಟ್ಟಡ ತ್ಯಾಜ್ಯವನ್ನು ಗೋಡೆಯ ಪಕ್ಕದಲ್ಲೇ ಸುರಿದ ಪರಿಣಾಮ ಗೋಡೆಯ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು ಎಂದು ವರದಿ ಉಲ್ಲೇಖಿಸಿದೆ.
ಸಂಬಂಧಿತ ಇಲಾಖೆಯಲ್ಲಿ ಖಾಯಂ ಸಿವಿಲ್ ಇಂಜಿನಿಯರ್‌ಗಳ ನೇಮಕಾತಿಯೇ ಆಗಿರಲಿಲ್ಲ. 2024ರಲ್ಲಿ ಗುತ್ತಿಗೆ ಆಧಾರದ ಮೇಲೆ ಇಂಜಿನಿಯರ್‌ಗಳನ್ನು ನೇಮಿಸಲು ಅನುಮತಿ ದೊರಕಿದ್ದರೂ, ನೇಮಕಾತಿ ಪ್ರಕ್ರಿಯೆ ನಡೆದಿರಲಿಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಬೀದಿ ಬದಿ ವ್ಯಾಪಾರಿಗಳ ಪುನರ್ವಸತಿ ಕುರಿತು ಬಿಬಿಎಂಪಿ ನೀಡಿದ ಭರವಸೆಯ ಆಧಾರದಲ್ಲಿ ಹೈಕೋರ್ಟ್ 2025ರ ಮಾರ್ಚ್ 3ರಂದು ಅರ್ಜಿಗಳನ್ನು ವಿಲೇವಾರಿ ಮಾಡಿತ್ತು. ಆದರೂ ಜಿಬಿಎ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಫುಟ್‌ಪಾತ್ ಒತ್ತುವರಿ ತೆರವುಗೊಳಿಸುವಲ್ಲಿ ವಿಫಲವಾಗಿದೆ ಎಂದು ವರದಿ ಟೀಕಿಸಿದೆ.
ಪ್ರಸ್ತುತ ಸ್ಥಳೀಯ ಪೊಲೀಸರು ಒತ್ತುವರಿ ನಡೆಸಿದ್ದ ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಬಿಎನ್‌ಎಸ್ ಸೆಕ್ಷನ್ 285 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ವಿಚಾರಣೆ ವೇಳೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಪ್ರತಿಕ್ರಿಯಿಸಿ, ಘಟನೆಗೆ ಸಂಬಂಧಿಸಿದಂತೆ ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ನಿರ್ಲಕ್ಷ್ಯ ವಹಿಸಿದ ಇಂಜಿನಿಯರ್‌ಗಳಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ಅವರ ಹೇಳಿಕೆಗಳ ಬಳಿಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಹೈಕೋರ್ಟ್ ಆದೇಶದಂತೆ ಮುಂದಿನ ಒಂದು ತಿಂಗಳೊಳಗೆ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.



