Monday, April 27, 2026
Google search engine

Homeರಾಜ್ಯಮೇ 9 ರಂದು ಬಿಎಸ್‌ವೈ ಬೃಹತ್ ಅಭಿಮಾನೋತ್ಸವ : ಚಿತ್ರದುರ್ಗದಲ್ಲಿ ಐತಿಹಾಸಿಕ ಸಿದ್ಧತೆ

ಮೇ 9 ರಂದು ಬಿಎಸ್‌ವೈ ಬೃಹತ್ ಅಭಿಮಾನೋತ್ಸವ : ಚಿತ್ರದುರ್ಗದಲ್ಲಿ ಐತಿಹಾಸಿಕ ಸಿದ್ಧತೆ

ಚಿತ್ರದುರ್ಗ : ಕರ್ನಾಟಕ ರಾಜಕಾರಣದ ದಣಿವರಿಯದ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಾರ್ವಜನಿಕ ಜೀವನದಲ್ಲಿ ಸುದೀರ್ಘ 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಚಿತ್ರದುರ್ಗದಲ್ಲಿ ಮೇ 9 ರಂದು ಬೃಹತ್ ‘ಅಭಿಮಾನೋತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಐತಿಹಾಸಿಕ ಸಮಾರಂಭದ ಸಿದ್ಧತೆಗಾಗಿ ನಗರದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಸಮೀಪ ಬೃಹತ್ ಪೆಂಡಾಲ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಹಲವಾರು ಮಠಾಧೀಶರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ ಅವರು, ಬಿಎಸ್ ವೈ ಅವರನ್ನು ಬಣ್ಣಿಸಿದರಲ್ಲದೆ, “ಯಡಿಯೂರಪ್ಪ ಅವರು ಕೇವಲ ಅಧಿಕಾರಕ್ಕಾಗಿ ಹೋರಾಡಿದವರಲ್ಲ; ಸವಾಲುಗಳು ಎದುರಾದಾಗ ಬೆನ್ನು ತೋರಿಸದೆ, ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಶಕ್ತಿ ಅವರದು. ರೈತರು, ದಲಿತರು, ಮಹಿಳೆಯರು ಹಾಗೂ ಶೋಷಿತ ವರ್ಗದ ಕಣ್ಣೀರು ಒರೆಸುವ ಕೆಲಸವನ್ನು ಅವರು ಪ್ರಾಮಾಣಿಕವಾಗಿ ಮಾಡಿದ್ದಾರೆ. ಅವರ 50 ವರ್ಷಗಳ ರಾಜಕೀಯ ತಪಸ್ಸು ಇಂದಿನ ಯುವ ಪೀಳಿಗೆಗೆ ದೊಡ್ಡ ಪ್ರೇರಣೆಯಾಗಬೇಕು ಎಂದು ಶ್ಲಾಘಿಸಿದರು.

ಇದೇ ವೇಳೆ ಆರ್.ಅಶೋಕ್ ಮಾತನಾಡಿ, ಈ ಸಮಾರಂಭವು ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಇದು ಪಕ್ಷಾತೀತವಾಗಿ ನಡೆಯುತ್ತಿರುವ ಬೃಹತ್ ಕಾರ್ಯಕ್ರಮವಾಗಿದ್ದು, ಜೆಡಿಎಸ್ ಸೇರಿದಂತೆ ಎಲ್ಲಾ ವರ್ಗದ ನಾಯಕರನ್ನು ಆಹ್ವಾನಿಸಲಾಗುತ್ತಿದೆ. ಮೇ 8ರ ಸಂಜೆ 5 ಗಂಟೆಗೆ ಯಡಿಯೂರಪ್ಪ ಅವರು ಚಿತ್ರದುರ್ಗಕ್ಕೆ ಆಗಮಿಸಲಿದ್ದು, ವಿವಿಧ ಕಲಾತಂಡಗಳ ಮೆರವಣಿಗೆಯೊಂದಿಗೆ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಗುವುದು. ಮೇ 9ರಂದು ನಡೆಯುವ ಪ್ರಮುಖ ವೇದಿಕೆ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಪಾಲ್ಗೊಳ್ಳಲಿದ್ದಾರೆ.

ಸಮಾರಂಭದ ಆಯೋಜನೆ ಅತ್ಯಂತ ಬೃಹತ್ ಮಟ್ಟದಲ್ಲಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ನಿರೀಕ್ಷೆಯಿದ್ದು, ಸುಮಾರು 1.50 ಲಕ್ಷ ಜನರು ಏಕಕಾಲಕ್ಕೆ ಕುಳಿತು ಊಟ ಮಾಡುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ.ಶ್ರೀರಾಮುಲು ಹಾಗೂ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡುತ್ತಾ, ರಾಜ್ಯದ 29 ಸಾವಿರ ಹಳ್ಳಿಗಳಿಂದ ಜನರು ಆಗಮಿಸಿ ಈ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಮೈದಾನದ ಸಮೀಪದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪಕ್ಷದ ನಾಯಕರು ವಿಶೇಷ ಪೂಜೆ ಸಲ್ಲಿಸಿದರು. ಗೋಪೂಜೆ, ಧ್ವಜಸ್ತಂಭ ಪೂಜೆ, ಧ್ವಜಾರೋಹಣ ನಂತರ ಭೂಮಿ ಪೂಜೆ ನೆರವೇರಿಸಲಾಯಿತು. ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ ಮತ್ತಿತರ ಮಠಾಧೀಶರು ಪೂಜಾಧಿ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿದ್ದರು.

ಚಿತ್ರದುರ್ಗದಲ್ಲಿ ಮೇ.9ರಂದು ನಡೆಯಲಿರುವ ಬಿಎಸ್​ವೈ ಅಭಿಮಾನೋತ್ಸವ ಪಕ್ಷಾತೀತ ಕಾರ್ಯಕ್ರಮ ಎಂದು ವಿಧಾನಸಭೆ ಪ್ರತಿ ಪಕ್ಷ ನಾಯಕ ಆರ್.ಅಶೋಕ್ ಹೇಳಿದರು. ಇದು ಪಕ್ಷದಿಂದ ಆಯೋಜಿಸಿದ ಕಾರ್ಯಕ್ರಮವಲ್ಲ. ಜೆಡಿಎಸ್ ಸೇರಿ ಯಾರ್ಯಾರನ್ನು ಆಹ್ವಾನಿಸಬೇಕೆಂದು ಯಡಿಯೂರಪ್ಪ ಕುಟುಂಬಸ್ಥರು ತೀಮಾನಿಸುತ್ತಾರೆ ಎಂದರು.

RELATED ARTICLES
- Advertisment -
Google search engine

Most Popular