Monday, July 13, 2026
Google search engine

Homeಅಪರಾಧಸಾಕ್ಷಿ ಸಂದೀಪ್‌ಗೆ ಬೆದರಿಕೆ ಪ್ರಕರಣ : ದರ್ಶನ್ ಅಭಿಮಾನಿಗಳ ಬಂಧನದ ಬಳಿಕ ಪ್ರಭಾವಿಗಳ ಹೆಸರು ಚರ್ಚೆಗೆ

ಸಾಕ್ಷಿ ಸಂದೀಪ್‌ಗೆ ಬೆದರಿಕೆ ಪ್ರಕರಣ : ದರ್ಶನ್ ಅಭಿಮಾನಿಗಳ ಬಂಧನದ ಬಳಿಕ ಪ್ರಭಾವಿಗಳ ಹೆಸರು ಚರ್ಚೆಗೆ

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಬೆಳವಣಿಗೆ ಆಗುತ್ತಲೇ ಇದ್ದು, ಪ್ರಕರಣದ 49ನೇ ಸಾಕ್ಷಿಯಾಗಿರುವ ಸಂದೀಪ್ ಅವರಿಗೆ ನ್ಯಾಯಾಲಯದಲ್ಲಿ ಸಾಕ್ಷಿ ಹೇಳದಂತೆ ಬೆದರಿಕೆ ಹಾಕಿದ ಆರೋಪದ ಮೇಲೆ ನಟ ದರ್ಶನ್ ಅಭಿಮಾನಿ ಬಳಗದ ಮೂವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಪುನೀತ್, ಸುಹಾಸ್ ಮತ್ತು ವೇಣು ಎಂದು ಗುರುತಿಸಲಾಗಿದ್ದು, ವಿಚಾರಣೆ ವೇಳೆ ಪ್ರಕರಣದ ಹಿಂದೆ ಇನ್ನಷ್ಟು ವ್ಯಕ್ತಿಗಳ ಸಂಪರ್ಕ ಇರುವ ಮಾಹಿತಿ ದೊರೆತಿದೆ ಎಂದು ತಿಳಿದುಬಂದಿದೆ.

ಪೊಲೀಸರ ಪ್ರಕಾರ, ಬಂಧಿತ ಪುನೀತ್ ಗೌರವ್ ಶೆಟ್ಟಿ ಹಾಗೂ ಕಿರಣ್ ರೆಡ್ಡಿ ಎಂಬುವವರೊಂದಿಗೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ತನಿಖಾ ತಂಡದ ಗಮನಕ್ಕೆ ಬಾರದಂತೆ ಸಾಮಾನ್ಯ ಕರೆಗಳ ಬದಲು ವಾಟ್ಸಾಪ್ ಕರೆಗಳ ಮೂಲಕ ಮಾತುಕತೆ ನಡೆಸಿ ಸಾಕ್ಷಿಗೆ ಬೆದರಿಕೆ ಹಾಕುವ ಯೋಜನೆ ರೂಪಿಸಿದ್ದರು ಎಂಬ ಆರೋಪವಿದೆ.

ಗೌರವ್ ಶೆಟ್ಟಿ ಸಂಜಯನಗರದ ಪ್ರಮುಖ ಬಾರ್ ಮಾಲೀಕರೊಬ್ಬರ ಆಪ್ತನಾಗಿದ್ದು, ಸಾಕ್ಷಿ ಮೇಲೆ ಒತ್ತಡ ಹೇರುವ ಪ್ರಯತ್ನದಲ್ಲಿ ಆತನ ಪಾತ್ರದ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪುನೀತ್ ಬಂಧನದ ಬಳಿಕ ಗೌರವ್ ಶೆಟ್ಟಿ ಮತ್ತು ಕಿರಣ್ ರೆಡ್ಡಿ ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಸಾಕ್ಷಿಗೆ ಬೆದರಿಕೆ ಆರೋಪ : ಸಾಕ್ಷಿ ಸಂದೀಪ್ ಅವರನ್ನು ಮಾತುಕತೆಯ ನೆಪದಲ್ಲಿ ಕರೆಸಿಕೊಂಡು ಕಾರಿನಲ್ಲಿ ಕರೆದೊಯ್ದು, ನ್ಯಾಯಾಲಯದಲ್ಲಿ ನಟ ದರ್ಶನ್ ವಿರುದ್ಧ ಸಾಕ್ಷಿ ಹೇಳದಂತೆ ಒತ್ತಡ ಹೇರಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಸಂದೀಪ್ ಒಪ್ಪದಿದ್ದಾಗ, ಜೈಲಿನಲ್ಲಿರುವ ನಟ ದರ್ಶನ್ ಹೆಸರನ್ನು ಉಲ್ಲೇಖಿಸಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಸಾಕ್ಷಿ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ ಬಳಿಕ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.

ಮತ್ತಷ್ಟು ತನಿಖೆ ಮುಂದುವರಿಕೆ : ಕಾಮಾಕ್ಷಿಪಾಳ್ಯ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವೇಣು, ಸುಹಾಸ್ ಮತ್ತು ಪುನೀತ್ ಬಂಧಿತರಾಗಿದ್ದು, ಪ್ರಕರಣದ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

RELATED ARTICLES
- Advertisment -
Google search engine

Most Popular