ಬೆಂಗಳೂರು : 2025ರ ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಹಾಗೂ ಮಾಜಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ವಿರುದ್ಧ ಆರಂಭಿಸಲಾಗಿದ್ದ ಇಲಾಖಾ ವಿಚಾರಣೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ.
ಪ್ರಕರಣದ ಬಳಿಕ ಬಿ.ದಯಾನಂದ ಅವರನ್ನು ಮೊದಲು ಅಮಾನತುಗೊಳಿಸಲಾಗಿತ್ತು. ನಂತರ ಅಮಾನತು ಆದೇಶವನ್ನು ಹಿಂಪಡೆದು, ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳಡಿ ಇಲಾಖಾ ತನಿಖೆ ಆರಂಭಿಸಲಾಗಿತ್ತು.
ಸರ್ಕಾರವು ಆರೋಪ ಪತ್ರ ಮತ್ತು ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಅದಕ್ಕೆ ಪ್ರತಿಯಾಗಿ ಬಿ. ದಯಾನಂದ ಅವರು ತಮ್ಮ ಲಿಖಿತ ಉತ್ತರ ಸಲ್ಲಿಸಿ, ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ತಳ್ಳಿಹಾಕಿ ನಿರ್ದೋಷಿ ಎಂದು ಪರಿಗಣಿಸುವಂತೆ ಮನವಿ ಮಾಡಿದ್ದರು. ಅವರ ಉತ್ತರ ಹಾಗೂ ಆಡಳಿತ ಇಲಾಖೆಯ ಅಭಿಪ್ರಾಯವನ್ನು ಪರಿಶೀಲಿಸಿದ ಬಳಿಕ, ಸಮರ್ಥ ಪ್ರಾಧಿಕಾರವು ಇಲಾಖಾ ವಿಚಾರಣೆಯನ್ನು ಕೈಬಿಡಲು ತೀರ್ಮಾನಿಸಿದೆ.
ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಜುಲೈ 14, 2026ರಂದು ಆದೇಶ ಹೊರಡಿಸಿದ್ದು, ಬಿ.ದಯಾನಂದ ವಿರುದ್ಧದ ಇಲಾಖಾ ವಿಚಾರಣೆಯನ್ನು ಮುಕ್ತಾಯಗೊಳಿಸಿ, ಎಲ್ಲ ಆರೋಪಗಳಿಂದ ಅವರನ್ನು ಮುಕ್ತಗೊಳಿಸಲಾಗಿದೆ. ಈ ಆದೇಶವನ್ನು ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಹೊರಡಿಸಲಾಗಿದೆ.



