Wednesday, July 15, 2026
Google search engine

Homeರಾಜಕೀಯ'ತಪ್ಪಿದ್ದರೆ ನನಗೆ ಹೊಡೆಯಲಿ, ಅಧಿಕಾರಿಗಳ ಮೇಲೆ ಹಲ್ಲೆ ಯಾಕೆ ? : ಬಿಡದಿ ವಿವಾದದ ಬಗ್ಗೆ...

‘ತಪ್ಪಿದ್ದರೆ ನನಗೆ ಹೊಡೆಯಲಿ, ಅಧಿಕಾರಿಗಳ ಮೇಲೆ ಹಲ್ಲೆ ಯಾಕೆ ? : ಬಿಡದಿ ವಿವಾದದ ಬಗ್ಗೆ ಡಿಕೆ ಶಿವಕುಮಾರ್ ಕಿಡಿ

ಬೆಂಗಳೂರು : ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆ ಹಾಗೂ ಅಧಿಕಾರಿಗಳ ಮೇಲಿನ ಹಲ್ಲೆ ಪ್ರಕರಣಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪುಗಳಿದ್ದರೆ ನೇರವಾಗಿ ತಮ್ಮನ್ನು ಪ್ರಶ್ನಿಸಲಿ, ಆದರೆ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವುದು ಅಕ್ಷಮ್ಯ ಎಂದು ಅವರು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಇಲಾಖೆಯ ನಿಯಮಾವಳಿಗಳ ಪ್ರಕಾರ ಕೆಲಸ ಮಾಡುವ ಸರ್ಕಾರಿ ನೌಕರರನ್ನು ಗುರಿಯಾಗಿಸುವುದು ಸರಿಯಲ್ಲ. “ನನ್ನ ತಪ್ಪಿದ್ದರೆ ನನಗೆ ಪೊರಕೆಯಿಂದ ಹೊಡೆಯಲಿ, ಅದಕ್ಕೂ ನಾನು ಸಿದ್ಧ. ಆದರೆ ಅಧಿಕಾರಿಗಳ ಮೇಲೆ ಕೈ ಹಾಕಬಾರದು” ಎಂದು ಹೇಳಿದರು.

‘ಬಿಡದಿ ಯೋಜನೆ ನನ್ನ ಕನಸಿನ ಯೋಜನೆ ಅಲ್ಲ’ : ಬಿಡದಿ ಟೌನ್‌ಶಿಪ್ ಯೋಜನೆ ತಮ್ಮ ಕಲ್ಪನೆಯದ್ದಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ, ಈ ಯೋಜನೆಗೆ 2006ರಲ್ಲಿ ಆಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲೇ ಚಾಲನೆ ಸಿಕ್ಕಿತ್ತು ಎಂದು ಹೇಳಿದರು.

ಆ ಸಂದರ್ಭದಲ್ಲಿ ಐದು ಉಪನಗರಗಳ ನಿರ್ಮಾಣಕ್ಕಾಗಿ ಜಾಗತಿಕ ಟೆಂಡರ್ ಪ್ರಕ್ರಿಯೆ ಆರಂಭವಾಗಿತ್ತು. ಆಗಿನ ಸರ್ಕಾರದಲ್ಲಿ ಆರ್.ಅಶೋಕ್ ಕೂಡ ಸಚಿವರಾಗಿದ್ದರು ಎಂದು ನೆನಪಿಸಿದ ಅವರು, ಭೂ ಅಭಿವೃದ್ಧಿ ಮತ್ತು ಖಾಸಗಿ ಹೂಡಿಕೆ ಪ್ರಕ್ರಿಯೆಗಳ ಕುರಿತು ಪ್ರಶ್ನೆಗಳನ್ನು ಎತ್ತಿದರು.

ತಮ್ಮ ವಿರುದ್ಧ ರಾಜಕೀಯವಾಗಿ ಷಡ್ಯಂತ್ರ ನಡೆಯುತ್ತಿದೆ ಎಂಬ ಆರೋಪ ಮಾಡಿದ ಡಿ.ಕೆ. ಶಿವಕುಮಾರ್, ಜೈಲು ನನಗೆ ಹೊಸದಲ್ಲ. ಅಧಿಕಾರವನ್ನು ಸಹಿಸಿಕೊಳ್ಳಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಹಲವು ಯೋಜನೆಗಳಿಗೆ ಈ ಹಿಂದೆ ಭೂ ಸ್ವಾಧೀನ ನಡೆದಿದ್ದು, ಅದರಿಂದ ಆ ಭಾಗದ ರೈತರಿಗೆ ಅಭಿವೃದ್ಧಿ ಸಾಧ್ಯವಾಗಿದೆ ಎಂದರು.

ಪ್ರಸ್ತುತ ಬಿಡದಿ ಯೋಜನೆಗೆ ರೈತರಿಂದ ಬಲವಂತವಾಗಿ ಭೂಮಿ ಪಡೆಯುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ, ಭೂಮಾಲೀಕರ ಒಪ್ಪಿಗೆ ಹಾಗೂ ಸೂಕ್ತ ಪರಿಹಾರದ ಆಧಾರದ ಮೇಲಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಯೋಜನೆಯ ಸಾಧಕ-ಬಾಧಕಗಳನ್ನು ಪರಿಶೀಲಿಸಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು. ಸಮಿತಿಯ ವರದಿ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular