ಬೆಂಗಳೂರು : ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಬಯಸಿದ ಸ್ಥಾನ ಸಿಕ್ಕರೂ ಡಿಕೆಶಿ ಮುಂದಿರುವ ಹಾದಿ ಹೂವಿನ ಹಾಸಿಗೆಯಲ್ಲ. ಸಾಲು ಸಾಲು ಸವಾಲುಗಳೇ ನೂತನ ಮುಖ್ಯಮಂತ್ರಿಯ ಎದುರಿವೆ. ರಾಜಕೀಯ, ಆಡಳಿತಾತ್ಮಕ ಮತ್ತು ಆರ್ಥಿಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸವಾಲುಗಳು ಕಾದಿವೆ. ರಾಜ್ಯದ ಆರ್ಥಿಕ ಸ್ಥಿತಿಯ ನಡುವೆ ಗ್ಯಾರಂಟಿ ಯೋಜನೆಗಳನ್ನು ಮುನ್ನಡೆಸುವುದರ ಜೊತೆಗೆ ಕೆಲ ಜಲ ವಿವಾದಗಳನ್ನು ಬಗೆಹರಿಸುವ ಹೊಣೆಯೂ ಡಿಕೆಶಿ ಹೆಗಲೇರಲಿದೆ.
ಪ್ರಭಾವಿ ಜಾತಿ ಸಮುದಾಯಗಳು, ವಿವಿಧ ಪ್ರದೇಶಗಳು ಮತ್ತು ಪಕ್ಷದ ಒಳಗಿನ ಗುಂಪುಗಳನ್ನು ಪ್ರತಿನಿಧಿಸುವ ಹಿರಿಯ ಶಾಸಕರಿಂದ ಸಚಿವ ಸ್ಥಾನಕ್ಕಾಗಿ ಒತ್ತಡ ಹೆಚ್ಚಿರುವ ಕಾರಣ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗಬೇಕಿರುವುದು ಡಿಕೆಶಿ ಎದುರಿಗಿರುವ ಮೊದಲ ಸವಾಲಾಗಿದೆ. ಸಿದ್ದರಾಮಯ್ಯ ಬೆಂಬಲಿಗರು ತಮ್ಮ ಪ್ರಭಾವ ಮುಂದುವರಿಯಬೇಕೆಂದು ನಿರೀಕ್ಷಿಸುತ್ತಿದ್ದರೆ, ಡಿ.ಕೆ. ಶಿವಕುಮಾರ್ ಬಣ ಹೆಚ್ಚಿನ ಪ್ರಾತಿನಿಧ್ಯವನ್ನು ಬಯಸುತ್ತಿದೆ. ಇದರಿಂದ ಖಾತೆ ಹಂಚಿಕೆ ಪ್ರಕ್ರಿಯೆ ಸಂಕೀರ್ಣವಾಗುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಅವರು ಕಟ್ಟಿಕೊಟ್ಟ ಅಹಿಂದಾ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು) ಮತಬ್ಯಾಂಕ್ ಅನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ಡಿಕೆಶಿಗಿದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಲು ಅಹಿಂದಾ ಸಮುದಾಯಗಳ ಬೆಂಬಲ ಪ್ರಮುಖ ಪಾತ್ರವಹಿಸಿತ್ತು. ಹೀಗಾಗಿ ಒಕ್ಕಲಿಗ ಸಮುದಾಯ ಹಾಗೂ ಪಕ್ಷದ ಸಂಘಟನೆಯ ಮೇಲಿನ ಹಿಡಿತ ಹೊಂದಿರುವ ಶಿವಕುಮಾರ್, ಅಹಿಂದಾ ಸಮುದಾಯಗಳ ಹಿತಾಸಕ್ತಿಗಳನ್ನು ಕೂಡ ರಕ್ಷಿಸುವ ಭರವಸೆ ನೀಡಬೇಕಿದೆ. ಈ ಸಮುದಾಯಗಳಲ್ಲಿ ಅಸಮಾಧಾನ ಉಂಟಾದರೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ರಾಜಕೀಯ ಲಾಭವಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಯುವನಿಧಿ ಹಾಗೂ ಗೃಹಜ್ಯೋತಿಗೆ ವಾರ್ಷಿಕ ಸುಮಾರು 51,000 ಕೋಟಿ ವೆಚ್ಚವಾಗುತ್ತಿದೆ. ಈ ಯೋಜನೆಗಳು ಜನಪ್ರಿಯವಾಗಿದ್ದರೂ, ರಾಜ್ಯದ ಹಣಕಾಸಿನ ಮೇಲೆ ಹೆಚ್ಚುತ್ತಿರುವ ಒತ್ತಡ ಮತ್ತು ಅಭಿವೃದ್ಧಿ ವೆಚ್ಚದ ಮೇಲೆ ಅದರ ಪರಿಣಾಮದ ಬಗ್ಗೆ ಆರ್ಥಿಕ ತಜ್ಞರು ಹಾಗೂ ಪ್ರತಿಪಕ್ಷಗಳು ಪ್ರಶ್ನೆ ಎತ್ತುತ್ತಿವೆ. ಹೀಗಾಗಿ ಆದಾಯ ಸಂಗ್ರಹಣೆ ಹೆಚ್ಚಿಸುವುದು, ಹೂಡಿಕೆಗಳನ್ನು ಆಕರ್ಷಿಸುವುದು ಹಾಗೂ ವೆಚ್ಚಗಳಿಗೆ ಆದ್ಯತೆ ನಿಗದಿಪಡಿಸುವುದು ಹೊಸ ಸರ್ಕಾರದ ಪ್ರಮುಖ ಜವಾಬ್ದಾರಿಯಾಗಲಿದೆ.
ಮೇಕೆದಾಟು ಯೋಜನೆ ಹಾಗೂ ಕಾವೇರಿ ನೀರು ಹಂಚಿಕೆ ವಿವಾದವು ಶಿವಕುಮಾರ್ ಅವರ ಆಡಳಿತಕ್ಕೆ ಸೂಕ್ಷ್ಮ ರಾಜಕೀಯ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ. 2023ರ ಚುನಾವಣೆಗೆ ಮುನ್ನ ಕನಕಪುರದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿ ಮೇಕೆದಾಟು ಯೋಜನೆಗೆ ಬಲವಾದ ಬೆಂಬಲ ವ್ಯಕ್ತಪಡಿಸಿದ್ದ ಶಿವಕುಮಾರ್, ಮುಖ್ಯಮಂತ್ರಿಯಾದ ಬಳಿಕ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯುವ ಒತ್ತಡವನ್ನು ಎದುರಿಸಲಿದ್ದಾರೆ. ಯೋಜನೆ ಸಂಬಂಧ ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಈಗಾಗಲೇ ಕಠಿಣ ನಿಲುವು ತಳೆದಿರುವ ಕಾರಣ ವಿಚಾರ ಮತ್ತಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.
ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿರುವ ಅಭಿವೃದ್ಧಿಯನ್ನು ರಾಜ್ಯದ ಇತರೆ ಭಾಗಗಳಿಗೆ ವಿಸ್ತರಿಸುವುದು ಮತ್ತೊಂದು ದೊಡ್ಡ ಸವಾಲಾಗಿದೆ. ಉತ್ತರ ಕರ್ನಾಟಕ ಮತ್ತು ಗ್ರಾಮೀಣ ಪ್ರದೇಶಗಳ ಜನಪ್ರತಿನಿಧಿಗಳು ತಮ್ಮ ಭಾಗಗಳಿಗೆ ಹೆಚ್ಚಿನ ಗಮನ ನೀಡುವಂತೆ ನಿರಂತರವಾಗಿ ಆಗ್ರಹಿಸುತ್ತಿದ್ದಾರೆ. ಬರ, ನೀರಾವರಿ ಕೊರತೆ, ಬೆಳೆ ನಷ್ಟ ಮತ್ತು ಮಾರುಕಟ್ಟೆ ಬೆಲೆಗಳ ಏರಿಳಿತದಂತಹ ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದಾರೆ.
ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗ ಈ ಹಿಂದೆ ನೀಡಿದ್ದ ಜಾತಿ ಗಣತಿಯ ವರದಿ ಪ್ರಕಾರ ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮೊದಲ ಸ್ಥಾನದಲ್ಲಿದ್ದರೆ, ಎರಡನೆಯ ಸ್ಥಾನದಲ್ಲಿ ಲಿಂಗಾಯತರು, ಮೂರನೇ ಸ್ಥಾನದಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ) ಹಾಗೂ ನಾಲ್ಕನೆಯ ಸ್ಥಾನದಲ್ಲಿ ಮುಸ್ಲಿಮರು, ಐದನೆಯ ಸ್ಥಾನದಲ್ಲಿ ಒಕ್ಕಲಿಗರು ಇದ್ದರು. ಆದರೆ ರಾಜೀನಾಮೆಗೂ ಮುನ್ನ ಸಿದ್ದರಾಮಯ್ಯನವರಿಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಸಲ್ಲಿಸಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವರದಿಯ ಅಂಕಿ-ಅಂಶಗಳೇ ಬೇರೆ ಹೇಳುತ್ತಿವೆ. ಆ ಪೈಕಿ ರಾಜ್ಯದಲ್ಲಿ ಮುಸ್ಲಿಂ ಅತಿ ದೊಡ್ಡ ಸಮುದಾಯವಾಗಿದೆ. ಶೇ.14ರಷ್ಟು ಅಂದರೆ ಬರೋಬ್ಬರಿ 75.25 ಲಕ್ಷ ಮುಸ್ಲಿಂ ಜಸಂಖ್ಯೆ ಇರುವ ಬಗ್ಗೆ ವರದಿ ತಿಳಿಸಿದೆ. ವೀರಶೈವ ಲಿಂಗಾಯತ ಶೇ.11ರಷ್ಟು 60 ರಿಂದ 65 ಲಕ್ಷ ಜನಸಂಖ್ಯೆ ಹೊಂದಿದ್ದು ಕರ್ನಾಟಕದಲ್ಲಿ ಎರಡನೇ ಅತಿ ದೊಡ್ಡ ಸಮುದಾಯವಾಗಿದ್ದರೆ, ಶೇ.10ರೊಂದಿಗೆ ಒಕ್ಕಲಿಗರು 55 ರಿಂದ 60 ಲಕ್ಷ ಜನಸಂಖ್ಯೆ ಹೊಂದಿದ್ದು 3ನೇ ಸಮುದಾಯವಾಗಿದೆ. ಇನ್ನು ಕುರುಬರು ಸಮುದಾಯ ಶೇ.8ರಷ್ಟು ಇದ್ದು, 40 ರಿಂದ 45 ಲಕ್ಷ ಜನಸಂಖ್ಯೆ ಹೊಂದಿದ್ದು ರಾಜ್ಯದ 4ನೇ ದೊಡ್ಡ ಸಮುದಾಯವಾಗಿದೆ ಎಂದು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಜಾತಿವಾರು ಜನಸಂಖ್ಯೆ ಬಗ್ಗೆ ಉಲ್ಲೇಖವಾಗಿದೆ. ಹೀಗಾಗಿ ಜಾತಿ ಗಣತಿ ಸಂಬಂಧ ನಿರ್ಧಾರವೂ ಸರ್ಕಾರದ ಮುಂದಿರುವ ಮತ್ತೊಂದು ದೊಡ್ಡ ಸವಾಲಾಗಿದೆ.



