Tuesday, July 14, 2026
Google search engine

Homeರಾಜಕೀಯಬಿಡದಿಯಲ್ಲಿ ಅಧಿಕಾರಿಗಳ ಮೇಲಿನ ಆಕ್ರೋಶಕ್ಕೆ ಸಿಎಂ ಧೋರಣೆಯೇ ಕಾರಣ : ಬಿ.ವೈ.ವಿಜಯೇಂದ್ರ ವಾಗ್ದಾಳಿ

ಬಿಡದಿಯಲ್ಲಿ ಅಧಿಕಾರಿಗಳ ಮೇಲಿನ ಆಕ್ರೋಶಕ್ಕೆ ಸಿಎಂ ಧೋರಣೆಯೇ ಕಾರಣ : ಬಿ.ವೈ.ವಿಜಯೇಂದ್ರ ವಾಗ್ದಾಳಿ

ಕಲಬುರಗಿ : ಬಿಡದಿಯಲ್ಲಿ ಸರ್ವೆಗೆ ತೆರಳಿದ್ದ ಅಧಿಕಾರಿಗಳ ವಾಹನ ತಡೆದು ಪೊರಕೆಯಿಂದ ಹೊಡೆದ ಘಟನೆಗೆ ರಾಜ್ಯದ ಮುಖ್ಯಮಂತ್ರಿ ಧೋರಣೆಯೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಈ ಬಗ್ಗೆ ಕಲಬುರಗಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿಯಲ್ಲಿ ಸರ್ವೆಗೆ ಹೋದ ಅಧಿಕಾರಿಗಳ ಕಾರು ತಡೆದು ಪೊರಕೆಯಿಂದ ಹೊಡೆದಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಧೋರಣೆಯಿಂದ ಅಧಿಕಾರಿಗಳೇ ಬಿಸಿ ಅನುಭವಿಸುವಂತಾಗಿದ್ದು, ಸಿಎಂಗೆ ರೈತರ ಹಿತಾಸಕ್ತಿಗಿಂತ ರಿಯಲ್ ಎಸ್ಟೇಟ್ ಮೇಲೆಯೇ ಹೆಚ್ಚು ಆಸಕ್ತಿ ಇದೆ ಎಂದು ಟೀಕಿಸಿದರು.

ಹಿಂದಿನ ಮುಖ್ಯಮಂತ್ರಿ ಉತ್ತರ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ತೋರಿದ್ದರು. ಈಗಿನ ಮುಖ್ಯಮಂತ್ರಿಯೂ ಅದೇ ಹಾದಿಯಲ್ಲಿದ್ದಾರೆ. ಬಿಡದಿ ಟೌನ್‌ಶಿಪ್ ಬಗ್ಗೆ ಇರುವ ಕಾಳಜಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಬಗ್ಗೆ ಇಲ್ಲ ಎಂದು ಆರೋಪಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ವಾಗ್ದಾಳಿ ನಡೆಸಿದ ವಿಜಯೇಂದ್ರ, ತಮ್ಮ ಕ್ಷೇತ್ರದ ಸಮಸ್ಯೆಗಳಿಗಿಂತ ಅಂತರರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಉಕ್ರೇನ್–ರಷ್ಯಾ, ಇರಾನ್–ಅಮೆರಿಕ ಸಂಘರ್ಷಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅವರು, ತಮ್ಮ ಕ್ಷೇತ್ರದಲ್ಲೇ ಮಕ್ಕಳು ಕಲುಷಿತ ಆಹಾರ ಸೇವಿಸಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬಗ್ಗೆ ಗಮನ ಹರಿಸಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಇದುವರೆಗೆ ಕೃಷಿ ಸಚಿವರ ನೇಮಕವಾಗಿಲ್ಲ ಎಂದು ಆರೋಪಿಸಿದ ಅವರು, ರಾಜ್ಯ ಸರ್ಕಾರ ಅಭಿವೃದ್ಧಿಗಿಂತ ರಿಯಲ್ ಎಸ್ಟೇಟ್ ಯೋಜನೆಗಳತ್ತ ಹೆಚ್ಚು ಗಮನ ಹರಿಸಿದ್ದು, ಬೀದರ್ ಮತ್ತು ಕಲಬುರಗಿಗೆ ಬಂದು ಫೋಟೋಶೂಟ್ ಮಾಡಿ ಹೋಗುವುದಕ್ಕಿಂತ ರೈತರ ಸಮಸ್ಯೆಗಳನ್ನು ಆಲಿಸಬೇಕು. ಬಿಡದಿ ಟೌನ್‌ಶಿಪ್‌ಗೆ ಸಮಯ ಇರುವ ಸರ್ಕಾರಕ್ಕೆ ರೈತರ ಸಂಕಷ್ಟದ ಬಗ್ಗೆ ಯಾಕೆ ಕಾಳಜಿ ಇಲ್ಲ? ಎಂದು ಪ್ರಶ್ನಿಸಿದರು.

ಎಸ್‌ಐಆರ್ ಪ್ರಕ್ರಿಯೆ ಕುರಿತು ಮಾತನಾಡಿದ ವಿಜಯೇಂದ್ರ, ಸರ್ಕಾರ ಎಸ್‌ಐಆರ್ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ವಲಸಿಗರಿಗೆ ಎಫ್‌ಆರ್‌ಸಿ ಪ್ರಮಾಣಪತ್ರಗಳನ್ನು ನೀಡಲಾಗುತ್ತಿದೆ. ಇದು ದೇಶದ್ರೋಹದ ಕೆಲಸ ಎಂದು ಆರೋಪಿಸಿದರು.

ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಡಾ.ಉಮೇಶ್ ಜಾಧವ್, ಶಾಸಕ ಬಸವರಾಜ ಮತ್ತಿಮಡು, ಬಿ.ಜಿ. ಪಾಟೀಲ, ಸುಭಾಷ್ ಗುತ್ತೇದಾರ್, ರಾಜಕುಮಾರ ಪಾಟೀಲ ತೇಲ್ಕೂರ್, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular