ಚಿಕ್ಕಮಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’ ಟ್ರೆಂಡ್‌ಗೆ ಪ್ರತಿಯಾಗಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ‘ಹಿಟ್ ಪಾರ್ಟಿ’ ಎಂಬ ಹೊಸ ಟ್ರೆಂಡ್ ಹುಟ್ಟಿಕೊಂಡಿದೆ. ಜಿರಳೆಗಳನ್ನು ನಿಯಂತ್ರಿಸುವ ಸಂಕೇತವಾಗಿ ‘ಹಿಟ್’ ಮತ್ತು ‘ಲಕ್ಷ್ಮಣರೇಖೆ’ ಹೆಸರಿನಲ್ಲಿ ಈ ಸಂಘಟನೆ ರೂಪುಗೊಂಡಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ.
ಶೃಂಗೇರಿ ಕ್ಷೇತ್ರದ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಜಗದೀಶ್‌ಚಂದ್ರ ಅವರು ಈ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಟ್ರೆಂಡ್ ಹೆಚ್ಚಾಗುತ್ತಿದ್ದಂತೆ, ಅದಕ್ಕೆ ಕೌಂಟರ್ ನೀಡುವ ಉದ್ದೇಶದಿಂದ ಈ ಪಾರ್ಟಿ ಆರಂಭಿಸಲಾಗಿದೆ ಎಂದು ಹೇಳಲಾಗಿದೆ.
ಇನ್ನು ಜಿರಳೆಗಳಿಗೆ ನಾವು ಹೆದರುವುದಿಲ್ಲ ಎಂಬ ಘೋಷಣೆಯೊಂದಿಗೆ ಹಿಟ್ ಪಾರ್ಟಿ ಕಾರ್ಯಕರ್ತರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದು, ಜಿರಳೆಗಳು ಎಲ್ಲೇ ಕಾಣಿಸಿಕೊಂಡರೂ ‘ಹಿಟ್’ ಸ್ಪ್ರೇ ಅಥವಾ ‘ಲಕ್ಷ್ಮಣರೇಖೆ’ ಬಳಸಿ ನಿಯಂತ್ರಿಸಲು ಸಿದ್ಧ ಎಂದು ವ್ಯಂಗ್ಯಭರಿತ ಸಂದೇಶಗಳನ್ನು ಹರಿಬಿಡುತ್ತಿದ್ದಾರೆ.
ಈ ಟ್ರೆಂಡ್ ಕೇವಲ ಹೆಸರಿಗಷ್ಟೇ ಸೀಮಿತವಾಗದೇ, ಇನ್‌ಸ್ಟಾಗ್ರಾಂ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದು, ಲಕ್ಷಾಂತರ ಮಂದಿ ಈ ಪಾರ್ಟಿಯನ್ನು ಫಾಲೋ ಮಾಡುತ್ತಿದ್ದು, ‘ಜಿರಳೆಗಳನ್ನು ಮಟ್ಟಹಾಕಲು ನಮ್ಮ ಬಳಿ ಅಸ್ತ್ರಗಳಿವೆ’ ಎಂಬ ಪೋಸ್ಟರ್‌ಗಳು ಮತ್ತು ಸ್ಲೋಗನ್‌ಗಳು ವೈರಲ್ ಆಗುತ್ತಿವೆ.
ಅಲ್ಲದೆ ರಾಜಕೀಯ ವ್ಯಂಗ್ಯ, ಸೃಜನಶೀಲತೆ ಮತ್ತು ಹಾಸ್ಯದ ಮಿಶ್ರಣವಾಗಿರುವ ಈ ಹೊಸ ಟ್ರೆಂಡ್ ಯುವಪೀಳಿಗೆಯನ್ನು ಹೆಚ್ಚು ಆಕರ್ಷಿಸುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ‘ಹಿಟ್ ಪಾರ್ಟಿ’ ಮತ್ತು ‘ಕಾಕ್ರೋಚ್ ಜನತಾ ಪಾರ್ಟಿ’ ನಡುವಿನ ಡಿಜಿಟಲ್ ಸಮರ ಇದೀಗ ಚರ್ಚೆಯ ವಿಷಯವಾಗಿದೆ.



