ನವದೆಹಲಿ: ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಆಸರೆಯಾಗಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ತಂದಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಆಡಳಿತಕ್ಕಿಂತ ಒಳಜಗಳ ಮತ್ತು ಕುರ್ಚಿ ಕಿತ್ತಾಟದಲ್ಲೇ ನಿರತವಾಗಿದ್ದು, ಅದರ ದುಷ್ಪರಿಣಾಮ ಶಿಕ್ಷಣ ಕ್ಷೇತ್ರದ ಮೇಲೂ ಬಿದ್ದಿದೆ ಎಂದು ಅವರು ಟೀಕಿಸಿದರು.
UDISE+ ವರದಿಯನ್ನು ಉಲ್ಲೇಖಿಸಿದ ಜೋಶಿ, ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 2.12 ಲಕ್ಷ ಮಕ್ಕಳು ಸರ್ಕಾರಿ ಶಾಲೆಗಳನ್ನು ತೊರೆದಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. 2023-24ರಲ್ಲಿ 1,19,26,303 ವಿದ್ಯಾರ್ಥಿಗಳಿದ್ದರೆ, 2024-25ರಲ್ಲಿ 1,17,80,251ಕ್ಕೆ ಇಳಿದಿದ್ದು, 2025-26ರಲ್ಲಿ ಮತ್ತಷ್ಟು 66,037 ವಿದ್ಯಾರ್ಥಿಗಳು ಕಡಿಮೆಯಾಗಿ ಒಟ್ಟು ದಾಖಲಾತಿ 1,17,14,214ಕ್ಕೆ ತಲುಪಿದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳನ್ನು ಬಲಪಡಿಸುವ ಬದಲು ಮುಚ್ಚುವ ಪರಿಸ್ಥಿತಿ ನಿರ್ಮಿಸಿರುವುದು ಸರ್ಕಾರದ ವೈಫಲ್ಯ ಎಂದು ಆರೋಪಿಸಿದ ಅವರು, ಮೂಲಭೂತ ಸೌಕರ್ಯಗಳ ಕೊರತೆಯಿಂದ ಶಾಲೆಗಳು ಸೊರಗುತ್ತಿವೆ ಎಂದರು.
ಇದೇ ವೇಳೆ ರಾಜ್ಯದಲ್ಲಿ ಡ್ರಗ್ಸ್ ಜಾಲ ವಿಸ್ತರಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದ ಜೋಶಿ, ಯುವಜನರು ಸಮಾಜ ವಿರೋಧಿ ಚಟುವಟಿಕೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯ ಕಾಪಾಡಬೇಕಾದ ಸರ್ಕಾರ ಆಡಳಿತವನ್ನು ಕಡೆಗಣಿಸಿ ಅಧಿಕಾರದ ರಾಜಕಾರಣದಲ್ಲೇ ತೊಡಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.



