ಬೆಂಗಳೂರು: ಶಾಸಕರ ಹೆಸರಿನಲ್ಲಿ ಅವರ ವೈಯಕ್ತಿಕ ಸಹಾಯಕರು, ಪಕ್ಷದ ಕಾರ್ಯಕರ್ತರು ಹಾಗೂ ಪರಿಚಯಸ್ಥರು ಶಿಫಾರಸು ಪತ್ರಗಳ ಮೂಲಕ ಸರ್ಕಾರಿ ವಾಹನಗಳನ್ನು ಪಡೆದು ದುರ್ಬಳಕೆ ಮಾಡುತ್ತಿರುವ ಆರೋಪಗಳ ಹಿನ್ನೆಲೆ ವಿಧಾನಸಭೆ ಕಾರ್ಯಾಲಯ ಹೊಸ ನಿಯಮ ಜಾರಿಗೆ ತಂದಿದೆ. ಇದರಿಂದ ಶಾಸಕರಿಗೆ ಅಗತ್ಯವಿದ್ದಾಗ ವಾಹನಗಳ ಕೊರತೆ ಉಂಟಾಗುತ್ತಿರುವುದಾಗಿ ತಿಳಿಸಲಾಗಿದೆ.
ಮೂಲಗಳ ಪ್ರಕಾರ, ಶಾಸಕರ ಭವನದಲ್ಲಿ ಶಾಸಕರಿಗಾಗಿ ಸುಮಾರು 80 ಹಾಗೂ ವಿಧಾನ ಪರಿಷತ್ ಸದಸ್ಯರು ಮತ್ತು ಮಾಜಿ ಸದಸ್ಯರಿಗಾಗಿ 40 ವಾಹನಗಳು ಲಭ್ಯವಿವೆ. ಆದರೆ ವಾಹನ ಮತ್ತು ಚಾಲಕರ ಕೊರತೆಯಿಂದ ಅವುಗಳನ್ನು ಶಾಸಕರ ಅಗತ್ಯಕ್ಕೆ ಸದಾ ಸಿದ್ಧವಾಗಿಡಲು ಕ್ರಮ ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣಕ್ಕೆ ತೆರಳುವುದನ್ನು ಹೊರತುಪಡಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಹೊರಗೆ ವಾಹನ ಕಳುಹಿಸಲು ಅವಕಾಶ ಇರುವುದಿಲ್ಲ.
ವಾಹನ ಬಳಕೆಗೆ ಪ್ರತಿ ಕಿಲೋಮೀಟರ್ಗೆ ₹8ರಿಂದ ₹12ರವರೆಗೆ ಶುಲ್ಕ ವಿಧಿಸಲಾಗುತ್ತದೆ. ಹಾಲಿ ಶಾಸಕರ ವೇತನದಿಂದ ಹಾಗೂ ಮಾಜಿ ಶಾಸಕರ ಪಿಂಚಣಿಯಿಂದ ಈ ಮೊತ್ತವನ್ನು ನೇರವಾಗಿ ಕಡಿತಗೊಳಿಸಲಾಗುತ್ತದೆ. ಕ್ಯಾಶ್ಲೆಸ್ ವ್ಯವಸ್ಥೆ ಜಾರಿಯಲ್ಲಿರುವುದರಿಂದ ತಮ್ಮ ಹೆಸರಿನಲ್ಲಿ ಯಾರು ವಾಹನ ಬಳಸಿದ್ದಾರೆ ಎಂಬ ಮಾಹಿತಿ ಶಾಸಕರಿಗೆ ಸುಲಭವಾಗಿ ಲಭ್ಯವಾಗಲಿದೆ ಎಂದು ವಿಧಾನಸಭೆ ಕಾರ್ಯಾಲಯದ ಮೂಲಗಳು ತಿಳಿಸಿವೆ.



