ಬೆಂಗಳೂರು : ರಾಜ್ಯದಲ್ಲಿ ಮದ್ಯ ಅಂಗಡಿಗಳ ಕಾರ್ಯನಿರ್ವಹಣಾ ಸಮಯ ಉಲ್ಲಂಘನೆ ವಿಚಾರ ರಾಜಕೀಯವಾಗಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಸುರೇಶ್ ಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ರಾಜ್ಯದ ಹಲವು ಭಾಗಗಳಲ್ಲಿ ಮದ್ಯ ಅಂಗಡಿಗಳು ಮತ್ತು ಬಾರ್‌ಗಳು ಸರ್ಕಾರ ನಿಗದಿಪಡಿಸಿರುವ ಸಮಯಕ್ಕಿಂತ ಮುಂಚೆಯೇ ತೆರೆಯುತ್ತಿದ್ದು, ನಿಯಮಗಳನ್ನು ಬಹಿರಂಗವಾಗಿ ಉಲ್ಲಂಘಿಸುತ್ತಿವೆ ಎಂದು ಆರೋಪಿಸಿದ್ದಾರೆ. ಅಲ್ಲದೆ ನಿಯಮಗಳ ಪ್ರಕಾರ ಬೆಳಗ್ಗೆ 10 ಗಂಟೆಯ ನಂತರವೇ ಮದ್ಯ ಮಾರಾಟ ಆರಂಭವಾಗಬೇಕು. ಆದರೆ ಅನೇಕ ಕಡೆಗಳಲ್ಲಿ ಬೆಳಗ್ಗೆ 5 ಗಂಟೆಯಿಂದಲೇ ಅಂಗಡಿಗಳು ಕಾರ್ಯಾರಂಭ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಇನ್ನೂ ಈ ಅಕ್ರಮಗಳಿಂದ ಯುವಕರು ಸೇರಿದಂತೆ ಸಾಮಾನ್ಯ ಜನರಲ್ಲಿ ಮದ್ಯಪಾನದ ಪ್ರವೃತ್ತಿ ಹೆಚ್ಚುವ ಅಪಾಯ ಇದೆ ಎಂದು ಎಚ್ಚರಿಸಿದ ಅವರು, ಮುಂಜಾನೆಲೇ ಮದ್ಯಪಾನ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಅಸ್ವಸ್ಥವಾಗಿ ಬಿದ್ದಿರುವ ಘಟನೆಗಳು ಸಾಮಾನ್ಯವಾಗುತ್ತಿವೆ ಎಂದಿದ್ದಾರೆ. ಇದು ಸಮಾಜದ ಆರೋಗ್ಯ ಮತ್ತು ಶಿಸ್ತಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ತಿಳಿಸಿದ್ದಾರೆ. ಈ ಪರಿಸ್ಥಿತಿಗೆ ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಅವರು, ನಿಯಮ ಉಲ್ಲಂಘಿಸುವ ಅಂಗಡಿಗಳ ವಿರುದ್ಧ ಮಾತ್ರವಲ್ಲದೆ, ಅವುಗಳನ್ನು ನಿಯಂತ್ರಿಸಲು ವಿಫಲವಾದ ಅಧಿಕಾರಿಗಳ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರ ಮದ್ಯ ಮಾರಾಟದಿಂದ ಆದಾಯ ಹೆಚ್ಚಿಸುವ ಉದ್ದೇಶದಿಂದ ಈ ಉಲ್ಲಂಘನೆಗಳ ಬಗ್ಗೆ ಕಣ್ಣುಮುಚ್ಚಿಕೊಂಡಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿದ ಅವರು, ಹಾಗಿದ್ದರೆ ನೇರವಾಗಿ 24 ಗಂಟೆಗಳ ಮದ್ಯ ಮಾರಾಟಕ್ಕೆ ಅನುಮತಿ ನೀಡುವುದಾಗಿ ಘೋಷಿಸಲಿ ಎಂದು ವ್ಯಂಗ್ಯವಾಡಿದ್ದಾರೆ. ಇಷ್ಟಲ್ಲದೆ ಮುಂಜಾನೆ ಮದ್ಯ ಅಂಗಡಿಗಳು ತೆರೆಯುವುದರಿಂದ ಸಾರ್ವಜನಿಕ ಶಾಂತಿ ಭಂಗವಾಗುತ್ತಿದ್ದು, ಮಹಿಳೆಯರು ಮತ್ತು ಮಕ್ಕಳಿಗೆ ಹೆಚ್ಚಿನ ತೊಂದರೆ ಉಂಟಾಗುತ್ತಿದೆ. ಇಂತಹ ಪರಿಸ್ಥಿತಿ ಸರ್ಕಾರದ ಗೌರವಕ್ಕೂ ಧಕ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.



