Tuesday, April 28, 2026
Google search engine

Homeರಾಜಕೀಯದಲಿತ ಮುಖ್ಯಮಂತ್ರಿ ಒತ್ತಾಯ : ಕಾಂಗ್ರೆಸ್ ಒಳಗಡೆ ಹೊಸ ಚರ್ಚೆ

ದಲಿತ ಮುಖ್ಯಮಂತ್ರಿ ಒತ್ತಾಯ : ಕಾಂಗ್ರೆಸ್ ಒಳಗಡೆ ಹೊಸ ಚರ್ಚೆ

ಬೆಂಗಳೂರು : ಮೇ 15ರ ಒಳಗಡೆ ಕಾಂಗ್ರೆಸ್‌ ಹೈಕಮಾಂಡ್‌ ಡಿಕೆ ಶಿವಕುಮಾರ್‌ ಅವರಿಗೆ ಗಿಫ್ಟ್‌ ನೀಡಲಿದ್ದಾರೆ ಎಂದು ಡಿಕೆ ಬಣದ ಶಾಸಕರು ಹೇಳುತ್ತಿದ್ದರೆ ಮತ್ತೊಂದು ಕಡೆ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಮುಂದೆ ಕರ್ನಾಟಕದಲ್ಲಿ ದಲಿತರು ಮುಖ್ಯಮಂತ್ರಿಯಾಗಬೇಕೆಂದು ಬಹಿರಂಗವಾಗಿ ಹೇಳಿಕೆ ನೀಡಲು ಆರಂಭಿಸಿದ್ದಾರೆ.

ಅಧಿಕಾರ ಮುಂದುವರಿಸಲು ಅಥವಾ ಪದತ್ಯಾಗ ಮಾಡಲು ಸಿದ್ದರಾಮಯ್ಯನವರು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಮುಂದೆ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮ ಪ್ರಬಲ ಒತ್ತಾಯವಾಗಿದೆ ಎಂದು ಮಾಜಿ ಸಚಿವ ಕೆಎನ್‌ ರಾಜಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಣ್ಣ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಕ್ತ ಮನಸ್ಸಿನಲ್ಲಿದ್ದಾರೆ. ಹೈಕಮಾಂಡ್ ಮತ್ತು ರಾಹುಲ್ ಗಾಂಧಿ ಅವರು ನೀಡುವ ಯಾವುದೇ ಸೂಚನೆಯನ್ನು ಪಾಲಿಸಲು ಅವರು ಸಿದ್ಧರಿದ್ದಾರೆ. ಅಧಿಕಾರ ಮುಂದುವರಿಸಲು ಅಥವಾ ಪದತ್ಯಾಗ ಮಾಡಲು ಅವರು ಮಾನಸಿಕವಾಗಿ ಸಿದ್ಧರಾಗಿದ್ದು, ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ” ಎಂದು ಹೇಳಿದರು.

ರಾಜ್ಯದಲ್ಲಿ ಮುಂದಿನ ಬಾರಿ ದಲಿತ ಸಮುದಾಯದ ನಾಯಕರು ಮುಖ್ಯಮಂತ್ರಿಯಾಗಬೇಕು ಎಂಬುದು ನಮ್ಮ ಬೇಡಿಕೆ. ಈ ವಿಚಾರವನ್ನು ಈಗಾಗಲೇ ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಇದರೊಂದಿಗೆ ಸಚಿವ ಸಂಪುಟ ಪುನಾರಚನೆಯೂ ಆಗಬೇಕಿದೆ. ಹೊಸಬರಿಗೆ ಸಚಿವ ಸ್ಥಾನ ನೀಡುವ ಮೂಲಕ ಆಡಳಿತದಲ್ಲಿ ಹೊಸ ಬದಲಾವಣೆ ತರಬೇಕಿದೆ ಎಂದು ರಾಜಣ್ಣ ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ ಅವರ ನಾಯಕತ್ವದ ಬಗ್ಗೆ ಮಾತನಾಡುತ್ತಾ, 2013-18ರ ಅವಧಿಯ ಸಿದ್ದರಾಮಯ್ಯ ಅವರಿಗೂ ಮತ್ತು ಈಗಿನ ಸಿದ್ದರಾಮಯ್ಯ ಅವರಿಗೂ ಬಹಳ ವ್ಯತ್ಯಾಸವಿದೆ. ಅಹಿಂದ ವರ್ಗದ ನಿರೀಕ್ಷೆಗಳು ಸರಿಯಾಗಿ ಈಡೇರುತ್ತಿಲ್ಲ ಎಂಬ ಅಸಮಾಧಾನ ಆ ವರ್ಗಗಳಲ್ಲಿ ಮೂಡಿದೆ. ನಾವು ನೀಡಿದ್ದ ಭರವಸೆಗಳು ಸರಿಯಾಗಿ ಫಲಪ್ರದವಾಗದ ಕಾರಣ ಜನರ ಮನಸ್ಥಿತಿಯಲ್ಲಿ ಬದಲಾವಣೆಯಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

ರಾಜ್ಯ ಸರ್ಕಾರ ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಬೇಕಾದರೆ ಪ್ರಸ್ತುತ ಇರುವ ನಾಯಕತ್ವದ ಗೊಂದಲಗಳನ್ನು ಶೀಘ್ರವಾಗಿ ಬಗೆಹರಿಸಬೇಕು. ಹೈಕಮಾಂಡ್ ಗೊಂದಲ ಮುಂದುವರಿಯಲು ಅವಕಾಶ ನೀಡಬಾರದು. ಗೊಂದಲಗಳು ದೀರ್ಘಕಾಲ ಮುಂದುವರಿದರೆ ಅದು ಪಕ್ಷದ ಮೇಲೆ ದೊಡ್ಡ ಮಟ್ಟದ ಡ್ಯಾಮೇಜ್ ಉಂಟುಮಾಡುತ್ತದೆ. ಹೀಗಾಗಿ ಮಾನಸಿಕ ಸ್ಥಿರತೆಯಿಂದ ಕೂಡಿದ ಗಟ್ಟಿಯಾದ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳುವ ವಿಶ್ವಾಸ ನಮಗಿದೆ ಎಂದು ತಿಳಿಸಿದರು.

ಮುಂದಿನ ಚುನಾವಣೆಗೆ ಇನ್ನು ಎರಡು ವರ್ಷಗಳ ಸಮಯವಿದೆ. ರಾಜಕಾರಣ ಎಂಬುದು ಕ್ಷಣಕ್ಷಣಕ್ಕೂ ಬದಲಾಗುವಂತದ್ದು. ಮುಂದೆ ಏನಾಗಲಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ರಾಜಕಾರಣದಲ್ಲಿ ಇನ್ನೂ ಬಹಳಷ್ಟು ನೀರು ಹರಿಯಬೇಕಿದೆ. ಹೈಕಮಾಂಡ್ ಮುಂದೆ ನಾವೇನು ಹೇಳಬೇಕೋ ಅದನ್ನು ಸ್ಪಷ್ಟವಾಗಿ ಹೇಳಿದ್ದೇವೆ. ಅಂತಿಮವಾಗಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಬೇಕಿದೆ ಎಂದು ಹೇಳುವ ಮೂಲಕ ಭವಿಷ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಕುತೂಹಲ ಉಳಿಸಿದರು.

RELATED ARTICLES
- Advertisment -
Google search engine

Most Popular