ಚಿಕ್ಕಮಗಳೂರು : ಹಣದಾಸೆಗಾಗಿ ಸ್ವಂತ ಪುತ್ರಿಯನ್ನೇ ವಿದೇಶದಲ್ಲಿ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಿದ ಆರೋಪದ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳಾದ ಕ್ರಾಂತಿ ಹಾಗೂ ರಾಜಶೇಖರ್ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಇವರ 20 ವರ್ಷದ ಪುತ್ರಿ ನಂದಿತಾ ನಾಲ್ಕು ತಿಂಗಳ ಹಿಂದೆ ಗಿಡಮೂಲಿಕೆ ವ್ಯಾಪಾರದ ನೆಪದಲ್ಲಿ ಪೋಷಕರೊಂದಿಗೆ ಪಶ್ಚಿಮ ಆಫ್ರಿಕಾದ ಸೆನೆಗಲ್‌ಗೆ ತೆರಳಿದ್ದಳು. ಸುಮಾರು ಹತ್ತು ದಿನಗಳ ಹಿಂದೆ 7 ಲಕ್ಷ ರೂಪಾಯಿಗೆ ಪುತ್ರಿಯನ್ನು ಅಲ್ಲಿನ ವೇಶ್ಯಾವಾಟಿಕೆ ಜಾಲಕ್ಕೆ ಮಾರಾಟ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ವೇಳೆ ಬಂಧನದಲ್ಲಿದ್ದ ಯುವತಿ ತನ್ನ ಪರಿಸ್ಥಿತಿಯನ್ನು ವಿವರಿಸಿ ಪರಿಚಯಸ್ಥರಿಗೆ ವಿಡಿಯೋ ಸಂದೇಶ ಕಳುಹಿಸಿ ನೆರವು ಕೋರಿದ್ದಾಳೆ ಎನ್ನಲಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಭಾರತೀಯ ರಾಯಭಾರ ಕಚೇರಿ, ಸೆನೆಗಲ್ ಪೊಲೀಸರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಯುವತಿಯನ್ನು ಸುರಕ್ಷಿತವಾಗಿ ರಕ್ಷಿಸಿರುವುದಾಗಿ ತಿಳಿದುಬಂದಿದೆ.
ಇದೇ ವೇಳೆ, ಮಗಳನ್ನು ಭಾರತಕ್ಕೆ ಕಳುಹಿಸಿದ್ದೇವೆ ಎಂದು ಸಂಬಂಧಿಕರಿಗೆ ಹೇಳುತ್ತಿದ್ದ ಪೋಷಕರು, ಯುವತಿ ರಕ್ಷಿಸಲ್ಪಟ್ಟಿರುವ ವಿಚಾರ ತಿಳಿದ ಬಳಿಕ ಸೆನೆಗಲ್‌ನಿಂದ ಭಾರತಕ್ಕೆ ಮರಳಿದ್ದಾರೆ. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯ್ಮಾ ಅವರಿಗೆ ದೂರು ಸಲ್ಲಿಸಿದ್ದು, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೇರಿದಂತೆ ಅನ್ವಯವಾಗುವ ಕಾನೂನುಗಳಡಿ ಪ್ರಕರಣ ದಾಖಲಿಸಿ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದೆ.



