ನವದೆಹಲಿ : ಕೇಂದ್ರ ಸರ್ಕಾರವು ಇಂಧನ ರಫ್ತು ತೆರಿಗೆಯ ಇತ್ತೀಚಿನ ಹದಿನೈದು ದಿನಗಳ ಪರಾಮರ್ಶೆಯ ಭಾಗವಾಗಿ, ಪೆಟ್ರೋಲ್, ಡೀಸೆಲ್ ಮತ್ತು ಏವಿಯೇಷನ್ ಟರ್ಬೈನ್ ಫ್ಯೂಯಲ್ (ATF) ರಫ್ತಿನ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಪರಿಷ್ಕರಿಸಿದೆ.
ಪರಿಷ್ಕೃತ ದರಗಳ ಪ್ರಕಾರ, ಡೀಸೆಲ್ ಮೇಲಿನ ರಫ್ತು ಸುಂಕವನ್ನು ಲೀಟರ್‌ಗೆ 15.50 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ATF ರಫ್ತಿನ ಮೇಲಿನ ಸುಂಕವನ್ನು ಲೀಟರ್‌ಗೆ 14.50 ರೂಪಾಯಿಗಳಿಗೆ ಏರಿಸಲಾಗಿದೆ. ಅದೇ ಸಮಯದಲ್ಲಿ, ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು ಲೀಟರ್‌ಗೆ 2.50 ರೂಪಾಯಿಗಳಿಗೆ ಇಳಿಸಲಾಗಿದೆ. ಹಣಕಾಸು ಸಚಿವಾಲಯವು ಅಧಿಸೂಚಿಸಿರುವ ಈ ಪರಿಷ್ಕೃತ ದರಗಳು ಇಂದಿನಿಂದ ಜಾರಿಗೆ ಬಂದಿವೆ. ಆದಾಗ್ಯೂ, ದೇಶೀಯ ಬಳಕೆಯ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಧನ ರಫ್ತನ್ನು ಪರಿಷ್ಕರಣೆ ಮಾಡುವ ಮೂಲಕ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಪೆಟ್ರೋಲ್, ಡೀಸೆಲ್ ಮತ್ತು ATF ರಫ್ತಿನ ಮೇಲಿನ ಈ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಈ ವರ್ಷದ ಮಾರ್ಚ್ 27 ರಿಂದ ಜಾರಿಗೆ ತರಲಾಗಿತ್ತು.
ಈ ಸುಂಕದ ದರಗಳನ್ನು ಪ್ರತಿ ಹದಿನೈದು ದಿನಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ. ಕೊನೆಯ ಬಾರಿಗೆ ಈ ತಿಂಗಳ 1 ರಂದು ಪರಿಷ್ಕರಣೆ ನಡೆದಿತ್ತು. ಕಳೆದ ಪರಿಶೀಲನೆಯ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಮತ್ತು ATF ನ ಸರಾಸರಿ ಅಂತರರಾಷ್ಟ್ರೀಯ ಬೆಲೆಗಳ ಆಧಾರದ ಮೇಲೆ ಈ ದರಗಳನ್ನು ನಿರ್ಧರಿಸಲಾಗುತ್ತದೆ.



