ಬೆಂಗಳೂರು : ಗೃಹಲಕ್ಷಿ ಮತ್ತು ಗೃಹಜ್ಯೋತಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಗೆ ಪಾವತಿ ಮಾಡಿರುವ ಬಗ್ಗೆ ವಿವರಣೆ ನೀಡಿರುವ ಅವರು, ಪ್ರಸ್ತುತ 1,24,00,000 ಗೃಹಲಕ್ಷಿ ಫಲಾನುಭವಿಗಳಿಗೆ 2,000 ರೂ.ಗಳಂತೆ ಪ್ರತಿ ಮಾಹೆ ರೂ.2,480 ಕೋಟಿ ಹಾಗೂ ಪ್ರತಿ ವರ್ಷ ರೂ.29,760 ಕೋಟಿಗಳನ್ನು ಪಾವತಿ ಮಾಡಲಾಗುತ್ತಿದೆ. ಏಪ್ರಿಲ್, 2026ರ ಅಂತ್ಯಕ್ಕೆ ರೂ.72,253 ಕೋಟಿಗಳನ್ನು ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ.
ಗೃಹಜ್ಯೋತಿ ಯೋಜನೆಯಡಿ 1.64 ಕೋಟಿ ಫಲಾನುಭವಿಗಳಿದ್ದು, 200 ಯುನಿಟ್ ಒಳಗೆ ಉಚಿತ ವಿದ್ಯುತ್ ಪಡೆಯುತ್ತಿದ್ದು, ಏಪ್ರಿಲ್, 2026ರ ಅಂತ್ಯಕ್ಕೆ ಇದರ ಮೊತ್ತ 26,115 ಕೋಟಿ ರೂ. ಗಳಾಗಿರುತ್ತದೆ. ಅನ್ನಭಾಗ್ಯ ಯೋಜನೆಯಡಿ ಈವರೆವಿಗೆ ಒಟ್ಟಾರೆ 18,897 ಕೋಟಿ ಪಾವತಿ ಮಾಡಲಾಗಿದೆ. ಶಕ್ತಿ ಯೋಜನೆಯಡಿ ಜೂ.10ರಂದು ಮಹಿಳಾ ಪ್ರಯಾಣಿಕರು 757.62 ಉಚಿತ ಟಿಕೆಟ್ ಪಡೆದಿದ್ದು, ಇದರ ಮೌಲ್ಯ 19,890 ರೂ. ಕೋಟಿಗಳಾಗಿದೆ.
ಯುವನಿಧಿ ಯೋಜನೆಯಡಿ 3,59,000 ನಿರುದ್ಯೋಗಿ ಪದವೀಧರರು/ಡಿಪ್ಲೋಮ ಪದವೀಧರರಿಗೆ ತಲಾ 3000 ರೂ. ಮತ್ತು 1,500 ರೂ.ಗಳಂತೆ ಈವರೆವಿಗೆ .1115 ಕೋಟಿ ರೂ.ಗಳು ಪಾವತಿ ಮಾಡಲಾಗಿರುತ್ತದೆ. ಒಟ್ಟಾರೆ ಐದು ಪಂಚ ಗ್ಯಾರಂಟಿ ಯೋಜನೆಗಳಿಗೆ ಈವರೆವಿಗೂ ಕರ್ನಾಟಕ ಸರ್ಕಾರ ಒಟ್ಟು 1,38,270.21 ಕೋಟಿ ರೂ.ಗಳನ್ನು ಪಾವತಿ ಮಾಡಲಾಗಿದೆ.
ಮಾರ್ಚ್ 2026ರ ಅಂಕಿ ಅಂಶಗಳಂತೆ ಗೃಹಲಕ್ಷಿ ಫಲಾನುಭವಿಗಳಲ್ಲಿ ಮರಣ ಹೊಂದಿರುವ 1,95,224 ಫಲಾನುಭವಿಗಳಿಗೆ 2000 ರೂ.ಗಳಂತೆ ಪ್ರತಿ ತಿಂಗಳು ರೂ.39.05 ಕೋಟಿಗಳು ಹಾಗೂ ವಾರ್ಷಿಕ 468.54 ಕೋಟಿ ರೂ. ಪಾವತಿಯಾಗುವುದನ್ನು ತಡೆಯಲು ಅಗತ್ಯ ಕ್ರಮವಹಿಸಬಹುದು.
ಅದೇ ರೀತಿ ಮಾರ್ಚ್ 2026ರ ಅಂಕಿ ಅಂಶಗಳಂತೆ ಗೃಹಲಕ್ಷಿ ಫಲಾನುಭವಿಗಳಲ್ಲಿ ಐ.ಟಿ./ಜಿ.ಎಸ್.ಟಿ. ಪಾವತಿಸುತ್ತಿರುವ 1,94,560 ಫಲಾನುಭವಿಗಳಿಗೆ 2000 ರೂ.ಗಳಂತೆ ಪ್ರತಿ ತಿಂಗಳು ರೂ.38.91 ಕೋಟಿಗಳು ಹಾಗೂ ವಾರ್ಷಿಕ 466.94 ಕೋಟಿಗಳಾಗುತ್ತದೆ. ಐ.ಟಿ./ಜಿ.ಎಸ್.ಟಿ. ಪಾವತಿಸುವವರಿಗೆ ಸಹ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರೆ ಎಂಬುದನ್ನು ಪರಿಶೀಲಿಸಿ ಸರ್ಕಾರ ತೀರ್ಮಾನಿಸಬೇಕೆಂದು ಕೋರುತ್ತೇನೆ.
ಪ್ರತಿ ಗ್ರಾಮ ಅಥವಾ ನಗರ ಪ್ರದೇಶಗಳಲ್ಲಿ ಮರಣ ದಾಖಲೆಗಳನ್ನು ಕಡ್ಡಾಯವಾಗಿ ದಾಖಲಿಸಿ ಅದರಲ್ಲಿ ಫಲಾನುಭವಿಗಳ ವಿವರಗಳನ್ನು ಇಲಾಖೆಯೊಂದಿಗೆ ಹಂಚಿಕೊಳ್ಳುವಂತೆ ಸೂಚನೆ ನೀಡುವುದು. ಈಗಾಗಲೇ ಮರಣ ಹೊಂದಿರುವ ಫಲಾನುಭವಿಗಳಿಗೆ ಪಾವತಿಸಿರುವ ಮೊತ್ತವನ್ನು ಅವರ ಖಾತೆಯಿಂದ ಹಿಂಪಡೆಯುವಂತೆ ಬ್ಯಾಂಕ್‌ಗಳಿಂದ ನಿರ್ದೇಶನ ನೀಡಬೇಕೆಂದು ಅವರು ಕೋರಿದ್ದಾರೆ.



