Tuesday, June 16, 2026
Google search engine

Homeರಾಜಕೀಯಆರ್‌ಎಸ್‌ಎಸ್‌ ವಿರೋಧವೇ ಪ್ರಿಯಾಂಕ್‌ ಖರ್ಗೆಯ ರಾಜಕೀಯ ಬಂಡವಾಳ : ವಿಜಯೇಂದ್ರ

ಆರ್‌ಎಸ್‌ಎಸ್‌ ವಿರೋಧವೇ ಪ್ರಿಯಾಂಕ್‌ ಖರ್ಗೆಯ ರಾಜಕೀಯ ಬಂಡವಾಳ : ವಿಜಯೇಂದ್ರ

ಬೆಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌‍ಎಸ್‌‍) ವನ್ನು ಟೀಕೆ ಮಾಡುವುದರಿಂದ ನಿಮಗೆ ಸಂತೃಪ್ತಿ ಸಿಗುವುದಾದರೆ ಇದನ್ನು ಮುಂದುವರಿಸಿ. ನಿಮ್ಮ ಪ್ರತಿ ತೆಗಳಿಕೆಯೂ ಸುದ್ದಿಯಾಗುತ್ತದೆ, ಪ್ರತಿಕ್ರಿಯೆ ಹರಿದು ಬರುತ್ತದೆ ಎಂಬ ಭ್ರಮೆಯ ಪೊರೆ ಅತೀ ಶೀಘ್ರದಲ್ಲಿಯೇ ಕಳಚಿ ಬೀಳಲಿದೆ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೋಂದಣಿ ಕುರಿತು ವಿಪರೀತ ತಲೆಕೆಡಿಸಿಕೊಂಡಿರುವ ನಿಮ್ಮಂಥವರಿಗೆ ಆರ್‌ ಎಸ್‌‍ ಎಸ್‌‍ ಸರಸಂಚಾಲಕ ಮೋಹನ್‌ ಭಾಗವತ್‌ ಏನು ಉತ್ತರ ಕೊಡಬೇಕೋ ಅದನ್ನು ಸರಿಯಾಗಿಯೇ ಕೊಟ್ಟಿದ್ದಾರೆ. ಸದ್ಯ ನಿಮ್ಮ ರಾಜಕೀಯ ಬಂಡವಾಳ ಆರ್‌ ಎಸ್‌‍ ಎಸ್‌‍ ಅನ್ನು ಬಾಲಿಶವಾಗಿ ಟೀಕಿಸುವುದು, ಆ ಮೂಲಕ ನೆಹರು ಕುಟುಂಬದ ಕುಡಿಗಳನ್ನು ಸಂತೃಪ್ತಿ ಪಡಿಸುವುದು. ಇದರಲ್ಲಿ ನಿಮಗೆ ವಿಕೃತ ಖುಷಿ ಸಿಗುವುದಾದರೆ ಬೈದುಕೊಳ್ಳಿ, ನಿಮ್ಮ ಬಗ್ಗೆ ಮರುಕ ಉಂಟಾಗುತ್ತದೆ. ಏಕೆಂದರೆ ನೀವು ಆಕಾಶಕ್ಕೆ ಉಗುಳುತ್ತಿದ್ದೀರಿ ಎಂಬ ಸತ್ಯ ನಿಮಗರಿವಿದೆಯೋ ಇಲ್ಲವೋ ಎಂದು ವ್ಯಂಗ್ಯವಾಡಿದ್ದಾರೆ.

ರಾಷ್ಟ್ರ ವಿಧ್ವಂಸಕ ಚಟುವಟಿಕೆಯ ಅನೇಕ ಅಲ್ಪ ಸಂಖ್ಯಾತ ಹೆಸರಿನ ಮತೀಯವಾದಿ ಸಂಘಟನೆಗಳು ಈ ದೇಶದಲ್ಲಿ ತಲೆಯೆತ್ತಿರುವುದು, ಅಕ್ರಮ ವಿದೇಶಿ ದೇಣಿಗೆ ಪಡೆದು ರಾಷ್ಟ್ರದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವ ಮಾಹಿತಿ ಗೃಹ ಇಲಾಖೆ ನಡೆಸುತ್ತಿರುವ ನಿಮ್ಮ ಬಳಿಯೇ ಇದೆ. ಈ ಬಗ್ಗೆ ಪತ್ರ ಬರೆದು ಆ ಸಂಸ್ಥೆಗಳಿಂದ ವಿವರ ಏಕೆ ನೀವು ಕೇಳುವುದಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮದರಸಾಗಳಂತೆ ಗುಪ್ತವಾಗಿ ಕಾರ್ಯ ನಿರ್ವಹಿಸುವುದಿಲ್ಲ. ಕೇವಲ ಮತಾಂಧತೆಯನ್ನು ಬಿತ್ತಿ ರಾಷ್ಟ್ರೀಯತೆಯನ್ನು ವಿರೋಧಿಸಲು ಪ್ರಚೋದನೆ ನೀಡುವ ಮದರಸದಂಥಾ ಸಂಸ್ಥೆಗಳ ಚಟುವಟಿಕೆಗಳು ನಿಮ್ಮ ಕಣ್ಣಿಗೆ ಬೀಳುವುದಿಲ್ಲ, ಕಿವಿಗೂ ಕೇಳಿಸುವುದಿಲ್ಲ. ಏಕೆಂದರೆ ಅದರ ಮೂಲದಿಂದ ಉತ್ಪತ್ತಿಯಾಗುತಿರುವ ಮತಬ್ಯಾಂಕ್‌ ಆಧರಿಸಿ ಅಧಿಕಾರ ಅನುಭವಿಸುತ್ತಿರುವ ನಿಮಗೆ ರಾಷ್ಟ್ರ ವಿಧ್ವಂಸಕ ಚಟುವಟಿಕೆಯ ಬಗ್ಗೆ ತಲೆಕೆಡಿಸಿಕೊಳ್ಳುವ ಬದ್ಧತೆ-ನೈತಿಕತೆ ಇರಲು ಹೇಗೆ ಸಾಧ್ಯ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸ್ವಾತಂತ್ರ್ಯ ಯೋಧರು ಉದಾತ್ತ ಉದ್ದೇಶಕ್ಕಾಗಿ ತಮ್ಮ ಬೆವರ ಹನಿಯ ಹಣವನ್ನು ತೊಡಗಿಸಿ ಕಟ್ಟಿದ ಸುಮಾರು 5000 ಕೋಟಿಯ ಆಸ್ತಿ ಹೊಂದಿದ್ದ ಹೆರಾಲ್ಡ್ ಸಂಸ್ಥೆಯನ್ನು ಯಂಗ್‌ ಇಂಡಿಯನ್‌ ಹೆಸರಲ್ಲಿ ನುಂಗಿ ನೀರು ಕುಡಿದ ನೆಹರು ಕುಟುಂಬದ ಮಹಾನ್‌ ಫಲಾನುಭವಿಗಳಾಗಿರುವ ಖರ್ಗೆ ಕುಟುಂಬದ ಪ್ರಿಯಾಂಕ್‌ ಖರ್ಗೆ ಅವರೇ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪಾರದರ್ಶಕತೆಯ ಬದ್ಧತೆಯನ್ನು ಪಸರಿಸುವಲ್ಲಿ ತೋರಿದ ಸಮರ್ಪಣೆ ಹಾಗೂ ತ್ಯಾಗದ ಪ್ರತೀಕವಾಗಿ ಇಂದು ವಿಶ್ವದ ಅತ್ಯಂತ ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳೆಲ್ಲವೂ ನೇರ-ದಿಟ್ಟ- ಪಾರದರ್ಶಕ. ಪ್ರತೀ ಚಟುವಟಿಕೆಗಳೂ ಬಹಿರಂಗದಲ್ಲಿ ಅನಾವರಣ ಎಂದು ಆರ್‌ ಎಸ್‌‍ ಎಸ್‌‍ ಅನ್ನು ವಿಜಯೇಂದ್ರ ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ನನ್ನ ಹೆಂಡತಿಗೂ ಫ್ರೀ, ಕಾಕಾ ಪಾಟೀಲ್‌ಗೂ ಫ್ರೀ, ಮಹದೇವಪ್ಪ ನಿನಗೂ ಫ್ರೀ ಎಂದು ಘೋಷಿಸುವ ಮೂಲಕ ಭಾಗ್ಯಗಳು ಗಟ್ಟಿಯಾಗಿರುವವರಿಗೂ ಫ್ರೀ ಫ್ರೀ ಎಂದು ಡಂಗೂರ ಸಾರಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌‍ ಸರ್ಕಾರ, ಗೃಹಲಕ್ಷ್ಮೀ ಯೋಜನೆ, ಗೃಹಜ್ಯೋತಿ ಯೋಜಗಳೂ ಸೇರಿದಂತೆ ಭಾಗ್ಯಗಳ ಯೋಜನೆಗಳಿಗೆ ಕತ್ತರಿ ಹಾಕಲು ಮೊಸರಲ್ಲಿ ಕಲ್ಲು ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತೆ ಜಿಎಸ್‌‍ಟಿ , ಆದಾಯ ತೆರಿಗೆ ಹೆಸರಿನಲ್ಲಿ ಫಲಾನುಭವಿಗಳಿಗೆ ಅನರ್ಹತೆಯ ಪಟ್ಟಕಟ್ಟಲು ಪರಿಷ್ಕರಣೆಯ ರೂಪದಲ್ಲಿ ಜನರನ್ನು ವಂಚಿಸುವ ಕೆಲಸ ಆರಂಭಿಸಿದೆ, ಆ ಮೂಲಕ ಉಚಿತ ಭಾಗ್ಯ ಯೋಜನೆಗಳಿಗೆ ತಿಲಾಂಜಲಿ ನೀಡಲು ಕಾಂಗ್ರೆಸ್‌‍ ಸರ್ಕಾರ ಸಿದ್ಧತೆ ಆರಂಭಿಸಿದಂತೆ ಕಾಣುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ಖಜಾನೆ ಬರಿದಾಗಿದೆ, ಎಲ್ಲಾ ಮೂಲಗಳಿಂದಲೂ ಜನರಿಗೆ ಬೆಲೆ ಏರಿಕೆಯ ಬಿಸಿ ತಾಗಿಸಿ, ತೆರಿಗೆ ಮೇಲೆ ತೆರಿಗೆ ಏರಿಸಿ, ಮುದ್ರಾಂಕ ಶುಲ್ಕಗಳನ್ನು ಅಡ್ಡಾದಿಡ್ಡಿ ಹೆಚ್ಚಿಸಿ, ಶ್ರೀಸಾಮಾನ್ಯರ ಬದುಕನ್ನು ಹಿಂಡಿ ಹಿಪ್ಪೆ ಮಾಡಿರುವ ಸರ್ಕಾರ ತನ್ನ ಖಜಾನೆ ಬರಿದಾಗಿರುವುದನ್ನು ಬಯಲು ಮಾಡಿಕೊಳ್ಳುವುದರ ಬದಲು, ಈ ಯೋಜನೆಗಳಿಗೆ ಕತ್ತರಿ ಹಾಕಲು ಹೊರಟಿರುವುದು ಅತ್ಯಂತ ನಾಚಿಕೆಗೇಡಿನ ಪರಮಾವಧಿಯಾಗಿದೆ. ಕುಂಟು ನೆಪಗಳನ್ನು ಮುಂದೆ ಮಾಡಿಕೊಂಡು ಈ ಯೋಜನೆಗಳನ್ನು ಹಳ್ಳ ಹಿಡಿಸಲು ಹೊರಟರೆ, ಜನಾಕ್ರೋಶವನ್ನು ಪ್ರತಿನಿಧಿಸಿ ಬಿಜೆಪಿ ಬೀದಿಗಿಳಿದು ಹೋರಾಡಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

RELATED ARTICLES
- Advertisment -
Google search engine

Most Popular