ನವದೆಹಲಿ: ಇಂದು ಮುಂಜಾನೆ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ದೆಹಲಿಯ ವಿವೇಕ್ ವಿಹಾರ್ ಪ್ರದೇಶದಲ್ಲಿ ನಡೆದಿದೆ.
ಕಟ್ಟಡದ ಎರಡನೇ ಮಹಡಿಯಲ್ಲಿ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಈ ಬಗ್ಗೆ ತಿಳಿಯುತ್ತಿದ್ದಂತೆ 14 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ, ಬೆಂಕಿ ಕಟ್ಟಡದ ಮೂರನೇ ಮತ್ತು ನಾಲ್ಕನೇ ಮಹಡಿಗೂ ವ್ಯಾಪಕವಾಗಿ ಹರಡಿತ್ತು. ಈ ವೇಳೆ 9 ಮಂದಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ವಿವೇಕ್ ವಿಹಾರ್ ಪೂರ್ವ ದೆಹಲಿಯ ಒಂದು ಪ್ರಮುಖ ಸ್ಥಳವಾಗಿದೆ ಸದ್ಯ ಕಟ್ಟಡದಿಂದ ಹಲವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಗುರು ತೇಜ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ನಂತರ ಬೆಳಗ್ಗೆ 6 ಗಂಟೆಯ ಹೊತ್ತಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಕಟ್ಟಡದ ಹಲವು ಭಾಗಗಳು ಸುಟ್ಟುಹೋಗಿದ್ದು, ಮೇಲಿನ ಮಹಡಿಯಿಂದ ಹೊಗೆ ಹೊರಬರುತ್ತಿತ್ತು. ಎಲ್ಲಾ ಶವಗಳನ್ನು ವಶಪಡಿಸಿಕೊಂಡು ದೆಹಲಿ ಪೊಲೀಸ್ ಅಪರಾಧ ತಂಡಕ್ಕೆ ಹಸ್ತಾಂತರಿಸಿದ್ದಾರೆ.
ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ಎಸಿ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ನಿವಾಸಿಯೊಬ್ಬರು ಹೇಳಿದ್ದಾರೆ. ಎಸಿಯಲ್ಲಿ ಸಂಭವಿಸಿದ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 12-15 ಜನರನ್ನು ರಕ್ಷಿಸಲಾಗಿದೆ. ಆದಾಗ್ಯೂ, 4-5 ಜನರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.



