Friday, May 15, 2026
Google search engine

Homeರಾಜ್ಯಸುದ್ದಿಜಾಲಸಂಚಾರ ನಿಯಮ ಪಾಲನೆಯೇ ಸುರಕ್ಷಿತ ಬದುಕಿನ ಮಾರ್ಗ : ಡಿ.ಹೆಚ್.ಮುನಿಕೃಷ್ಣ

ಸಂಚಾರ ನಿಯಮ ಪಾಲನೆಯೇ ಸುರಕ್ಷಿತ ಬದುಕಿನ ಮಾರ್ಗ : ಡಿ.ಹೆಚ್.ಮುನಿಕೃಷ್ಣ

ಚಿಕ್ಕಬಳ್ಳಾಪುರ: ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸುರಕ್ಷಿತ ಪ್ರಯಾಣ ಸಾಧ್ಯವಾಗುತ್ತದೆ. ನಿರ್ಲಕ್ಷ್ಯ ತೋರಿದರೆ ಅಪಾಯ ಅನಿವಾರ್ಯ ಎಂದು ಗುಡಿಬಂಡೆ ವೃತ್ತ ನಿರೀಕ್ಷಕ ಡಿ.ಹೆಚ್.ಮುನಿಕೃಷ್ಣ ಹೇಳಿದರು.

ತಾಲೂಕಿನ ಪೆರೇಸಂದ್ರದಲ್ಲಿರುವ ಗುಡಿಬಂಡೆ ವೃತ್ತದಲ್ಲಿ ನೂತನ ಜೈ ಅಂಬೇಡ್ಕರ್ ವಾಹನ ಚಾಲಕರ ಸಂಘದ ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ವಾಹನ ಚಾಲನೆ ಕೇವಲ ಉದ್ಯೋಗವಲ್ಲ, ಜನರ ಜೀವಭದ್ರತೆಯ ಜವಾಬ್ದಾರಿಯೂ ಆಗಿದೆ. ಆದ್ದರಿಂದ ಚಾಲಕರು ಸಂಚಾರ ನಿಯಮಗಳನ್ನು ಪಾಲಿಸಿ, ಸುರಕ್ಷಿತ ಚಾಲನೆಗೆ ಆದ್ಯತೆ ನೀಡಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸುವುದನ್ನು ತಪ್ಪಿಸಿ, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವ ಮೂಲಕ ಸಂಘದ ಗೌರವ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಸಂದೇಶ ಪ್ರತಿಯೊಬ್ಬರ ಬದುಕಿಗೆ ದಾರಿದೀಪವಾಗಿದ್ದು, ಜೈ ಅಂಬೇಡ್ಕರ್ ಚಾಲಕರ ಸಂಘದ ಸದಸ್ಯರು ಸಮಾಜ ಸೇವೆಯಲ್ಲಿ ತೊಡಗಿರುವ ನಿಜವಾದ ಕರ್ತವ್ಯನಿಷ್ಠರು ಎಂದು ಪ್ರಶಂಸಿಸಿದರು.

ಅತಿವೇಗ, ಮೊಬೈಲ್ ಬಳಕೆ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ತಮ್ಮ ಜೀವನಕ್ಕೂ ಇತರರ ಸುರಕ್ಷತೆಗೂ ಅಪಾಯಕಾರಿಯಾಗಿದೆ. ಸೀಟ್ ಬೆಲ್ಟ್ ಬಳಕೆ ಜೀವ ರಕ್ಷಕವಾಗಿದ್ದು, ಪಾದಚಾರಿಗಳು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದರು. ವಾಹನದ ದಾಖಲೆಗಳು ಹಾಗೂ ಚಾಲನಾ ಪರವಾನಗಿಯನ್ನು ಸದಾ ನವೀಕರಿಸಿಕೊಂಡಿದ್ದರೆ ಯಾರೂ ತೊಂದರೆ ನೀಡುವುದಿಲ್ಲ ಎಂದು ಭರವಸೆ ನೀಡಿದರು.

ಬಳಿಕ ಜೈ ಅಂಬೇಡ್ಕರ್ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ್ ಮಾತನಾಡಿ, ಅಸಂಘಟಿತ ಕಾರ್ಮಿಕರಾದ ಚಾಲಕರ ಹಿತರಕ್ಷಣೆಯ ಉದ್ದೇಶದಿಂದ ಈ ಸಂಘವನ್ನು ಸ್ಥಾಪಿಸಲಾಗಿದ್ದು, ಸಂಘದ ಸದಸ್ಯರು ಪರಸ್ಪರ ಸಹಕಾರ, ಐಕ್ಯತೆ ಮತ್ತು ಶಿಸ್ತನ್ನು ಕಾಪಾಡಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಕೆಲ ಅಧಿಕಾರಿಗಳು ಚಾಲಕರೊಂದಿಗೆ ಅಸಮರ್ಪಕವಾಗಿ ವರ್ತಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭಗಳಲ್ಲಿ ಸಂಘದ ಸದಸ್ಯರಿಗೆ ಕಾನೂನು ಸಹಾಯ ಒದಗಿಸಲಾಗುವುದು ಎಂದು ತಿಳಿಸಿದರು.

ಸಂಘದ ಸಾಮಾಜಿಕ ಜಾಲತಾಣ ವಿಭಾಗದ ಆರ್ಮಿ ಶ್ರೀನಿವಾಸ್ ಮಾತನಾಡಿ, ಸಂಘದ ಸದಸ್ಯರು ಶಿಸ್ತು, ಸೌಹಾರ್ದತೆ ಮತ್ತು ಸೇವಾಭಾವದಿಂದ ನಡೆದುಕೊಳ್ಳಬೇಕು. ಜಾತಿ ಭೇದ ಹಾಗೂ ಅನ್ಯಾಯದ ವಿರುದ್ಧ ಜಾಗೃತಿ ಮೂಡಿಸಿ, ಯುವಜನತೆಗೆ ಶಿಕ್ಷಣದ ಮಹತ್ವ ತಿಳಿಸಬೇಕು ಎಂದು ಹೇಳಿದರು.

ದಸಂಸ ತಾಲೂಕು ಸಂಚಾಲಕ ಎನ್.ಪರಮೇಶ್ ಮಾತನಾಡಿ, ಬಾಬಾಸಾಹೇಬರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಏಳಿಗೆಗಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪರೇಸಂದ್ರ ಪೊಲೀಸ್ ಠಾಣೆಯ ಪಿಎಸ್‌ಐ ಗುಣವತಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular