Tuesday, July 7, 2026
Google search engine

Homeಕ್ರೀಡೆಫುಟ್‌ಬಾಲ್ ಏಕತೆಯ ಸಂಕೇತ : ಡುರಾಂಡ್ ಕಪ್ 2026 ಟ್ರೋಫಿ ಅನಾವರಣಗೊಳಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಫುಟ್‌ಬಾಲ್ ಏಕತೆಯ ಸಂಕೇತ : ಡುರಾಂಡ್ ಕಪ್ 2026 ಟ್ರೋಫಿ ಅನಾವರಣಗೊಳಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪ್ರತಿಷ್ಠಿತ ‘ಡುರಾಂಡ್ ಕಪ್ ಟೂರ್ನಮೆಂಟ್ 2026’ ರ ಟ್ರೋಫಿಗಳನ್ನು ಅನಾವರಣಗೊಳಿಸಿ, ಹಸಿರು ನಿಶಾನೆ ತೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು, ಫುಟ್‌ಬಾಲ್ ಕೇವಲ ಒಂದು ಆಟವಲ್ಲ, ಅದು ಉತ್ಕೃಷ್ಟತೆ, ಏಕತೆ ಮತ್ತು ಕ್ರೀಡಾ ಸ್ಫೂರ್ತಿಯ ಅದ್ಭುತ ಸಂಕೇತವಾಗಿದೆ ಎಂದು ಬಣ್ಣಿಸಿದರು.

ಹೊಸ ತಂಡಗಳ ಸೇರ್ಪಡೆಗೆ ಹರ್ಷ

ಡುರಾಂಡ್ ಕಪ್, ಪ್ರೆಸಿಡೆಂಟ್ಸ್ ಕಪ್ ಮತ್ತು ಶಿಮ್ಲಾ ಟ್ರೋಫಿ ಗೆಲ್ಲಲು ಈ ಬಾರಿ ಶ್ರೀಲಂಕಾದ ಒಂದು ತಂಡ ಸೇರಿದಂತೆ ಹಲವು ಹೊಸ ತಂಡಗಳು ಸ್ಪರ್ಧಿಸುತ್ತಿರುವುದಕ್ಕೆ ರಾಷ್ಟ್ರಪತಿಗಳು ಸಂತಸ ವ್ಯಕ್ತಪಡಿಸಿದರು. ಹೊಸ ತಂಡಗಳ ಸೇರ್ಪಡೆಯಿಂದ ಈ ಐತಿಹಾಸಿಕ ಕ್ರೀಡಾಕೂಟದ ಜನಪ್ರಿಯತೆ ಮತ್ತಷ್ಟು ಹೆಚ್ಚಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಭಾಗವಹಿಸುವ ಎಲ್ಲಾ ತಂಡಗಳು ಮತ್ತು ಆಟಗಾರರಿಗೆ ಶುಭ ಹಾರೈಸಿದರು.

ವಿಶ್ವಮಟ್ಟದಲ್ಲಿ ಭಾರತ ಸಾಧಿಸಬೇಕಾದ್ದು ಸಾಕಷ್ಟಿದೆ

ಪ್ರಸ್ತುತ ನಡೆಯುತ್ತಿರುವ ಫಿಫಾ ವಿಶ್ವಕಪ್ ಅನ್ನು ಉಲ್ಲೇಖಿಸಿದ ರಾಷ್ಟ್ರಪತಿಗಳು, “ವಿಶ್ವದ ಅತ್ಯುತ್ತಮ ತಂಡಗಳು ಮತ್ತು ಆಟಗಾರರು ತಮ್ಮ ದೇಶದ ಕೀರ್ತಿ ಹೆಚ್ಚಿಸಲು ಸ್ಪರ್ಧಿಸುತ್ತಿದ್ದಾರೆ. ಫುಟ್‌ಬಾಲ್ ಕ್ರೀಡೆಯು ಜನರನ್ನು ಪರಸ್ಪರ ಜೋಡಿಸುತ್ತದೆ” ಎಂದರು. ಇದೇ ವೇಳೆ, ಫುಟ್‌ಬಾಲ್ ಕ್ರೀಡೆಯಲ್ಲಿ ಭಾರತವು ವಿಶ್ವಮಟ್ಟದಲ್ಲಿ ತನ್ನದೇ ಆದ ಸ್ಥಾನವನ್ನು ಕಂಡುಕೊಳ್ಳಲು ಇನ್ನೂ ಸುದೀರ್ಘ ಹಾದಿ ಸಾಗಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಟೂರ್ನಿಯು ಯುವ ಆಟಗಾರರ ಪ್ರತಿಭೆಯನ್ನು ಪೋಷಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಆಶಿಸಿದರು.

ವಿಕಸಿತ ಭಾರತದ ಗುರಿ

ಕ್ರೀಡಾ ಸ್ಫೂರ್ತಿಯ ಮಹತ್ವ ಕೇವಲ ಆಟದ ಮೈದಾನಕ್ಕೆ ಸೀಮಿತವಾಗಿಲ್ಲ ಎಂದು ನೆನಪಿಸಿದ ರಾಷ್ಟ್ರಪತಿ ಮುರ್ಮು ಅವರು “ಕ್ರೀಡೆಯು ನಮಗೆ ಸಮಾನತೆ, ಸಹಕಾರ ಮತ್ತು ಕಠಿಣ ಸಂದರ್ಭಗಳಲ್ಲೂ ಧೃತಿಗೆಡದೆ ಮುನ್ನಡೆಯುವ ಜೀವನ ಮೌಲ್ಯಗಳನ್ನು ಕಲಿಸುತ್ತದೆ. ನಾವು 2047 ರ ವೇಳೆಗೆ ಭಾರತವನ್ನು ‘ವಿಕಸಿತ ರಾಷ್ಟ್ರ’ವನ್ನಾಗಿ ಮಾಡುವ ದಿಸೆಯಲ್ಲಿ ಮುನ್ನಡೆಯುತ್ತಿದ್ದೇವೆ. ಫುಟ್‌ಬಾಲ್‌ನಲ್ಲಿ ಆಟಗಾರರು ಪರಸ್ಪರ ಸಹಕರಿಸುತ್ತಾ ತಂಡವನ್ನು ವಿಜಯದತ್ತ ಮುನ್ನಡೆಸುವಂತೆ, ನಾವೆಲ್ಲಾ ದೇಶವಾಸಿಗಳು ಒಟ್ಟಾಗಿ ಕೈಜೋಡಿಸಿದರೆ ವಿಕಸಿತ ಭಾರತದ ಗುರಿಯನ್ನು ಸಾಧಿಸುವುದು ಖಚಿತ ” ಎಂದರು.

ಈ ಐತಿಹಾಸಿಕ ಟೂರ್ನಿಯೊಂದಿಗೆ ಗುರುತಿಸಿಕೊಂಡಿರುವ ಎಲ್ಲಾ ಮಾಜಿ ಹಾಗೂ ಹಾಲಿ ಅಧಿಕಾರಿಗಳು ಮತ್ತು ಆಟಗಾರರನ್ನು ರಾಷ್ಟ್ರಪತಿಗಳು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.

RELATED ARTICLES
- Advertisment -
Google search engine

Most Popular