Monday, July 13, 2026
Google search engine

Homeರಾಜ್ಯಸುದ್ದಿಜಾಲಮಾಜಿ ಶಾಸಕ ಸಯ್ಯದ್ ಯಾಸಿನ್ ನಿಧನ : ಸಿಎಂ ಡಿ.ಕೆ.ಶಿವಕುಮಾರ್ ಸಂತಾಪ

ಮಾಜಿ ಶಾಸಕ ಸಯ್ಯದ್ ಯಾಸಿನ್ ನಿಧನ : ಸಿಎಂ ಡಿ.ಕೆ.ಶಿವಕುಮಾರ್ ಸಂತಾಪ

ಬೆಂಗಳೂರು : ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಅವರ ಅಳಿಯ ಹಾಗೂ ರಾಯಚೂರು ನಗರದ ಮಾಜಿ ಶಾಸಕ ಸಯ್ಯದ್ ಯಾಸಿನ್ (70) ಅವರು ವಯೋಸಹಜ ಅನಾರೋಗ್ಯದಿಂದ ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಆರು ಬಾರಿ ಸ್ಪರ್ಧಿಸಿದ್ದ ಸಯ್ಯದ್ ಯಾಸಿನ್, 1999 ಮತ್ತು 2008ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. 2008ರ ಚುನಾವಣೆಯಲ್ಲಿ ರಾಯಚೂರು ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷದ ಏಕೈಕ ಮುಸ್ಲಿಂ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿದಿದ್ದರು. ಜನಪ್ರತಿನಿಧಿಯಾಗಿ ಪ್ರಗತಿಪರ ಕೆಲಸಗಳನ್ನು ಮಾಡಿದ್ದ ಯಾಸಿನ್ ಅವರು ಉತ್ತಮ ನಾಯಕ ಹಾಗೂ ಸಮಾಜದ ಹಿತಚಿಂತಕರಾಗಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಪುಲಕೇಶಿನಗರದ ಕೋಲ್ಸ್ ಪಾರ್ಕ್ ನಿವಾಸಕ್ಕೆ ಭೇಟಿ ನೀಡಿದ ಸಿಎಂ, ಸಯ್ಯದ್ ಯಾಸಿನ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಅವರ ಸೇವೆಯನ್ನು ಪರಿಗಣಿಸಿ ಆರು ಬಾರಿ ಟಿಕೆಟ್ ನೀಡಿತ್ತು. ಅವರು ನನ್ನೊಂದಿಗೆ ಶಾಸಕರಾಗಿ ಕಾರ್ಯನಿರ್ವಹಿಸಿದ್ದರು. ಶಾಲಾ ದಿನಗಳಿಂದಲೂ ನನಗೆ ಪರಿಚಿತರಾಗಿದ್ದರು. ಎಲ್ಲ ವರ್ಗದ ಜನರ ಪರವಾಗಿ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.

ಯಾಸಿನ್ ಅವರಿಗೆ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ಎದುರಾಗಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಸಾಕಷ್ಟು ಅನುಯಾಯಿಗಳನ್ನು ಹೊಂದಿದ್ದ ಅವರು, ಜಾಫರ್ ಷರೀಫ್ ಕುಟುಂಬದ ಹಿರಿಯ ಸದಸ್ಯರಾಗಿ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಸಯ್ಯದ್ ಯಾಸಿನ್ ಅವರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

RELATED ARTICLES
- Advertisment -
Google search engine

Most Popular