ತುಮಕೂರು : ಪಾವಗಡ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಬಡ ಮತ್ತು ನಿರ್ಗತಿಕ ಕುಟುಂಬಗಳನ್ನು ಗುರಿಯಾಗಿಸಿಕೊಂಡು ದೊಡ್ಡ ಮಟ್ಟದ ವಂಚನೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಮನೆ ಕಟ್ಟಿಕೊಡುತ್ತೇವೆ ಎಂದು ನಂಬಿಸಿ ಸುಮಾರು 126 ಕುಟುಂಬಗಳಿಂದ ಹಣ ಪಡೆದು ಪರಾರಿಯಾದ ಪ್ರಕರಣ ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮಾಹಿತಿಯ ಪ್ರಕಾರ, ಹಾವೇರಿ ಮೂಲದ ನೇಚರ್ ಚಾರಿಟೇಬಲ್ ಟ್ರಸ್ಟ್ ಎಂಬ ಸಂಸ್ಥೆಯ ಹೆಸರಿನಲ್ಲಿ ಈ ಯೋಜನೆಯನ್ನು ಪರಿಚಯಿಸಲಾಗಿತ್ತು. ಬಡ ಕುಟುಂಬಗಳಿಗೆ ಕೇವಲ 6 ಸಾವಿರ ರೂಪಾಯಿಗೆ ಮನೆ ನಿರ್ಮಿಸಿ ಕೊಡಲಾಗುತ್ತದೆ ಎಂದು ಭರವಸೆ ನೀಡಿದ್ದರು. ಈ ಮಾತು ನಂಬಿದ ಅನೇಕ ಕುಟುಂಬಗಳು ತಮ್ಮ ಕೈಯಲ್ಲಿದ್ದ ಸ್ವಲ್ಪ ಹಣವನ್ನು ಕೂಡ ನೀಡಿ ಯೋಜನೆಗೆ ಸೇರ್ಪಡೆಗೊಂಡಿದ್ದಾರೆ ಎನ್ನಲಾಗಿದೆ.
ಪಾವಗಡದ ಆದರ್ಶ ನಗರ, ಬ್ಯಾಡನೂರು, ಬೊಮ್ಮತನಹಳ್ಳಿ, ದವಡೆಬೆಟ್ಟ, ನಲಿಗಾನಹಳ್ಳಿ ಹಾಗೂ ಸಿ.ಕೆ.ಪುರ ಸೇರಿದಂತೆ ಹಲವು ಗ್ರಾಮಗಳ ಜನರು ಈ ಯೋಜನೆಗೆ ಹಣ ನೀಡಿದ್ದು, ಕಳೆದ ಸುಮಾರು ಆರು ತಿಂಗಳಿಂದ ಮನೆ ನಿರ್ಮಾಣ ಆರಂಭವಾಗುತ್ತದೆ ಎಂದು ಹೇಳುತ್ತಾ ಟ್ರಸ್ಟ್‌ನವರು ಸಮಯ ಕಳೆಯುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಇನ್ನೂ ಈ ಯೋಜನೆಯನ್ನು ನೋಡಿಕೊಳ್ಳುತ್ತಿದ್ದ ಟ್ರಸ್ಟ್‌ನ ಸೂಪರ್‌ವೈಸರ್ ಅಶ್ವಥ್ ನಾರಾಯಣ್ ಎಂಬಾತ ಹಣ ಸಂಗ್ರಹಿಸಿದ ಬಳಿಕ ಏಕಾಏಕಿ ಸಂಪರ್ಕಕ್ಕೆ ಸಿಗದೇ ಹೋಗಿದ್ದಾನೆ ಎಂದು ಸಂತ್ರಸ್ತರು ಹೇಳಿದ್ದಾರೆ. ನಂತರ ಟ್ರಸ್ಟ್ ಸಿಬ್ಬಂದಿ ಕೂಡ ಹಣದೊಂದಿಗೆ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ಹಣ ಕೊಟ್ಟು ಮನೆಗಾಗಿ ಕಾಯುತ್ತಿದ್ದ ಕುಟುಂಬಗಳು ಇದೀಗ ಹಣವೂ ಇಲ್ಲ, ಮನೆ ಕೂಡ ಇಲ್ಲ ಎಂಬ ಸ್ಥಿತಿಗೆ ತಲುಪಿದ್ದು, ಇದರಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಅಲ್ಲದೆ ಕೆಲವರು ನಿರಾಶೆಯಿಂದ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೂಡ ವರದಿಯಾಗಿದೆ. ವಂಚನೆಯಿಂದ ಬೇಸತ್ತ ಕೆಲ ನಿರಾಶ್ರಿತರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರೆಂಬ ಮಾಹಿತಿ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.
ಈ ಹಿನ್ನೆಲೆಯಲ್ಲಿ ಸಂತ್ರಸ್ತ ಕುಟುಂಬಗಳು ಒಟ್ಟಾಗಿ ಸೇರಿ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ (ಎಸ್‌ಪಿ) ದೂರು ನೀಡಲು ಮುಂದಾಗಿದ್ದು, ವಂಚನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ತಮ್ಮ ಹಣವನ್ನು ಮರಳಿ ಪಡೆಯಲು ಸಹಾಯ ಮಾಡಬೇಕು ಎಂದು ಆಗ್ರಹಿಸಿದ್ದಾರೆ.



