ಹನೂರು : ಕರ್ನಾಟಕ ರಾಜ್ಯ ರೈತ ಸಂಘಟನೆಯ ಹೋರಾಟದ ಫಲವಾಗಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹನೂರು ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚಿಸಿ ಕುಡಿಯುವ ನೀರು ಹಾಗೂ 12 ಸಾವಿರ ಎಕರೆ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಒದಗಿಸಲು ಉಡುತೊರೆಹಳ್ಳ ಯೋಜನೆಯನ್ನು 490 ಕೋಟಿ ರೂ. ಮೊತ್ತದಲ್ಲಿ ಕೈಗೆತ್ತಿಕೊಳ್ಳಲು ಅನುಮೋದನೆ ನೀಡಿರುವುದಕ್ಕೆ ಅಭಿನಂದಿಸುತ್ತೇವೆ ಎಂದು ರೈತ ಸಂಘಟನೆ ತಿಳಿಸಿದೆ.
ಈ ಕುರಿತು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ ತಾಲೂಕಿನ ಎಲ್ಲಾ ಹಳ್ಳಿಗಳು ಹಲವಾರು ವರ್ಷಗಳು ಮಳೆ ಇಲ್ಲದೆ ಅಂತರ್ಜಲ ಕುಸಿತದಿಂದ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿತ್ತು. 2020 ಮತ್ತು 2021 ಹಾಗೂ 2022 ನೇ ಸಾಲಿನಲ್ಲಿ ಕೆರೆಕಟ್ಟೆಗಳಲ್ಲಿ ನೀರು ತುಂಬಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹೋರಾಟ ಮಾಡಿ ನೀರು ತುಂಬಿಸಬೇಕೆಂದು ಹೋರಾಟ ಮಾಡಿತ್ತು ಎಂದು ತಿಳಿಸಿದರು.
ಅಲ್ಲದೆ ಅಂದಿನ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ 180 ಕೋಟಿ ರೂ. ಡಿ.ಪಿ.ಆರ್ ಮಾಡಲಾಗಿತ್ತು ಆದರೆ ಅನುದಾನವನ್ನು ಕೊಟ್ಟಿರಲಿಲ್ಲ. ಈಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಮ್ಮ ಹೋರಾಟದ ಫಲವಾಗಿ ಉಡುತೊರೆಹಳ್ಳ ಯೋಜನೆಯ ಅಭಿವೃದ್ಧಿಗೆ 490 ಕೋಟಿ ರೂ. ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಹಲವಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ನೀರಾವರಿ ಇಲಾಖೆ ಹಾಗೂ ತಾಲೂಕು ಕಚೇರಿ ಮುಂದೆ ಹೋರಾಟ ಮಾಡಿದ್ದೆವು ರಾಮಾಪುರದಿಂದ ಬೈಕ್ ರ್ಯಾಲಿ ಮಾಡಿ ಜಿಲ್ಲಾಡಳಿತ ಭವನದಲ್ಲಿ ಒತ್ತಾಯ ಮಾಡಿದ್ದೆವು.
ಅದೇ ರೀತಿ ಕಳೆದ ಫೆಬ್ರವರಿ ತಿಂಗಳ 25 ರಂದು ಹನೂರು ತಾಲೂಕಿನ ಅಜ್ಜೀಪುರ ಗ್ರಾಮದಿಂದ ಪಾದಯಾತ್ರೆಯ ಮೂಲಕ ಹೊರಟು ಬೆಂಗಳೂರಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ನೀರಾವರಿ ಯೋಜನೆಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದವು. ಅದರಂತೆ ಮುಖ್ಯಮಂತ್ರಿಗಳು ಈ ಬಜೆಟ್ ನಲ್ಲಿ ಅನುದಾನವನ್ನು ಕೊಡುವುದಾಗಿ ಭರವಸೆಯನ್ನ ನೀಡಿದ್ದರು. ಅದೇ ರೀತಿ ಮುಖ್ಯಮಂತ್ರಿಗಳು ಈ ಬಾರಿ ಬಜೆಟ್ ನಲ್ಲಿ ಅನುಮೋದನೆಯನ್ನ ನೀಡಿದ್ದಾರೆ. ತಕ್ಷಣ ಹಣವನ್ನ ಬಿಡುಗಡೆ ಮಾಡಿ ಯೋಜನೆಯ ಕೆಲಸ ಪ್ರಾರಂಭಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.
ಇನ್ನೂ ರೈತರ ಹೋರಾಟದ ಶ್ರಮ ಇದೆ. ಈ ಕ್ಷೇತ್ರದ ಶಾಸಕ ಮಂಜುನಾಥ್ ರವರು ಅಭಿನಂದಿನಿಸುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವರು ವೆಂಕಟೇಶ್. ಮಾಜಿ ಶಾಸಕರಾದ ಆರ್.ನರೇಂದ್ರರವರಿಗೂ ಅಭಿನಂದಿಸುತ್ತೇವೆ. ಮಳವಳ್ಳಿ ಮದ್ದೂರು ರಾಮನಗರ ರೈತ ಸಂಘಗಳು ನಮ್ಮ ಹೋರಾಟಕ್ಕೆ ಜೊತೆಯಾಗಿ ಬೆಂಬಲಿಸಿದ್ದಾರೆ. ರಾಜ್ಯಾಧ್ಯಕ್ಷರು ರೈತರ ಬೆಂಬಲಕ್ಕೆ ನಿಂತು ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದಾರೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಸರ್ಕಾರ ತಕ್ಷಣ ಹಣವನ್ನು ಬಿಡುಗಡೆ ಮಾಡಿ ಯೋಜನೆಯನ್ನು ಪ್ರಾರಂಭಿಸಿ ಈ ಭಾಗದ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸವನ್ನು ಮಾಡಿ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಲಿ ಎಂದು ಸರ್ಕಾರವನ್ನು ನಾವು ಒತ್ತಾಯಿಸುತ್ತೇವೆ ಎಂದು ತಿಳಿಸಿದರು.
ಬಳಿಕ ಹನೂರು ತಾಲೂಕು ಘಟಕ ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ, ತಾಲೂಕಿನ ಕೆರೆ ಕಟ್ಟೆಗಳನ್ನು ತುಂಬಿಸುವ ಯೋಜನೆಯ ಬಗ್ಗೆ ಹಲವಾರು ಬಾರಿ ನಾವು ಹೋರಾಟವನ್ನು ಮಾಡಿದ್ದೇವೆ. ನೀರಾವರಿ ಇಲಾಖೆ ಕಚೇರಿ ಮುಂಭಾಗ ತಾಲೂಕು ಕಚೇರಿ ಮುಂಭಾಗ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಬೈಕ್ ರ್ಯಾಲಿ ಮೂಲಕ ಪ್ರತಿಭಟನೆಯನ್ನು ಮಾಡಿದ್ದೇವೆ. ಮಾರ್ಚ್ 6 ರಂದು ಬಜೆಟ್ ನಡೆಯುತ್ತದೆ ಎಂಬ ಮಾಹಿತಿಯ ಮೇರೆಗೆ ನಾವು ಈ ಬಜೆಟ್ ನಲ್ಲಿ ಅನುದಾನವನ್ನು ಬಿಡುಗಡೆ ಮಾಡಲಿ ಎಂದು ಅಜ್ಜೀಪುರ ಗ್ರಾಮದಿಂದ ವಿಧಾನಸೌಧದ ವರೆಗೆ ಪಾದಯಾತ್ರೆಯನ್ನು ಮಾಡಿ ಉಡುತೊರೆ ಜಲಾಶಯ ಅಭಿವೃದ್ಧಿಗೆ 490 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯ ಮಾಡಿದ್ದೆವು.
ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದಂತೆ ಅವರು ನಮಗೆ ಕೊಟ್ಟ ಭರವಸೆಯಂತೆ ಈಗ ನಮಗೆ ಅನುದಾನದ ಅನುಮೋದನೆಯನ್ನು ನೀಡಿದ್ದಾರೆ. ರೈತರ ಕಷ್ಟವನ್ನು ಆಲಿಸಿ, ನಮ್ಮ ಹೋರಾಟಕ್ಕೆ ಸ್ಪಂದಿಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಹನೂರು ಭಾಗದಿಂದ ಮುಖ್ಯಮಂತ್ರಿಗಳಿಗೆ ಅಭಿನಂದನೆಯನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು.



