ನವದೆಹಲಿ : ಈಗಾಗಲೇ ಬೆಲೆ ಏರಿಕೆಯ ಹೊರೆ ಹೊತ್ತಿರುವ ಜನರಿಗೆ ಇಂಧನ ದರ ಏರಿಕೆ ಮತ್ತೊಂದು ಆಘಾತ ನೀಡಿದ್ದು, ಒಂದು ವಾರದೊಳಗೆ ಎರಡನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗಿದ್ದು, ತೈಲ ಕಂಪನಿಗಳು ಲೀಟರ್‌ಗೆ ಸುಮಾರು 90 ಪೈಸೆಯಷ್ಟು ದರ ಹೆಚ್ಚಿಸಿವೆ. ಇದಕ್ಕೂ ಮುನ್ನ ಮೇ 15ರಂದು ಇಂಧನ ದರದಲ್ಲಿ ₹3ರವರೆಗೆ ಏರಿಕೆ ಮಾಡಲಾಗಿತ್ತು.
ಏರಿಕೆಯ ನಂತರ, ಹೊಸ ದರ ಅನ್ವಯ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹97.77ಕ್ಕೆ ಹಾಗೂ ಡೀಸೆಲ್ ₹90.67ಕ್ಕೆ ಏರಿಕೆಯಾಗಿದ್ದು, ಮುಂಬೈನಲ್ಲಿ ಪೆಟ್ರೋಲ್ ₹107.59 ಮತ್ತು ಡೀಸೆಲ್ ₹94.08ಕ್ಕೆ ತಲುಪಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ ₹109.70ಕ್ಕೆ ಏರಿಕೆಯಾದರೆ, ಡೀಸೆಲ್ ₹96.07ಕ್ಕೆ ಹೆಚ್ಚಳವಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ₹104.49 ಹಾಗೂ ಡೀಸೆಲ್ ₹96.11ಕ್ಕೆ ಮಾರಾಟವಾಗುತ್ತಿದೆ.
ಇಂಧನ ದರ ಏರಿಕೆಯ ಪರಿಣಾಮ ದಿನನಿತ್ಯದ ಬದುಕಿನ ಮೇಲೂ ನೇರವಾಗಿ ಬೀಳಲಿದ್ದು, ಸಾರಿಗೆ ವೆಚ್ಚ ಹೆಚ್ಚಳದಿಂದ ಸಾರ್ವಜನಿಕ ಸಾರಿಗೆ, ಟ್ಯಾಕ್ಸಿ ಹಾಗೂ ಸರಕು ಸಾಗಣೆ ದರಗಳು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆಗಳ ಮೇಲೂ ಪರಿಣಾಮ ಬೀಳಬಹುದು ಎಂದು ಅಂದಾಜಿಸಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಹಣದುಬ್ಬರ ಹೆಚ್ಚುವ ಭೀತಿ ಮೂಡಿದೆ.



